Saturday, June 8, 2019

ಶಾಲಾ ಪ್ರಾರಂಭೋತ್ಸವ :ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ

ಶಾಲಾ ಪ್ರಾರಂಭೋತ್ಸವ :
29 ಮೇ 2019
 ಕಾರ್ಕಳ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ಶಾಲಾ ಪ್ರಾರಂಭೋತ್ಸವವನ್ನು ಈ ದಿನ ಆಚರಿಸಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯರಾಜ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಐ.ಟಿ. ಮಣಿಪಾಲ ಇಲ್ಲಿನ ಪ್ರಾಧ್ಯಾಪಕರಾದ ಡಾ|| ಶ್ರೀಹರಿ ಉಪಾಧ್ಯಾಯ ಅವರು “ವಿದ್ಯಾರ್ಥಿಗಳು ಪ್ರತಿ ಗಳಿಗೆಯ ಅನುಭವವನ್ನು ಪಡೆಯುತ್ತಾ ಬೆಳೆಯಬೇಕು. ಜಗತ್ತನ್ನು ಚಿಕ್ಕಪುಟ್ಟ ಸಂಗತಿಗಳ ಮೂಲಕವೇ ಅರಿಯಬೇಕು” ಎಂದರು.


ಸರ್ಕಾರದಿಂದ ಪೂರೈಕೆಯಾದ ಉಚಿತ ಪಠ್ಯಪುಸ್ತಕಗಳನ್ನು ಪುರಸಭೆಯ ಸದಸ್ಯರಾದ ಶ್ರೀ ಪ್ರದೀಪ ರಾಣೆ ವಿತರಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಹರ್ಷಿಣಿ ಜೈನ್ ಇವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್‍ಪುಸ್ತಕಗಳನ್ನು ಅತಿಥಿಗಳಾದ ಶ್ರೀ ಶೇಖ್ ಮುಸ್ತಾಫ್ ಶುಕೂರ್ ವಿತರಿಸಿದರು. ಅತಿಥಿಗಳಾಗಿ ಶ್ರೀ ಸತೀಶ ಮಡಿವಾಳ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ನಿರ್ಮಲಾಭಟ್ ಸ್ವಾಗತಿಸಿದರು. ಜಾನ್ ಮೆನೇಜಸ್ ಧನ್ಯವಾದ ಸಲ್ಲಿಸಿದರು.

Friday, April 5, 2019

-ಗಂಗಾ ಮಾತಾ ಸಾಹಿತ್ಯ ಸಂಘ - ಪುಸ್ತಕ ಪ್ರದರ್ಶನ



ಶಾಲೆಯ ಗ್ರಂಥಾಲಯವನ್ನು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಓದುವುದಲ್ಲದೆ ತಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕಗಳ ಕುರಿತು ಅಭಿಪ್ರಾಯ ಸಂಗ್ರಹಿಸಿ ವಿದ್ಯಾರ್ಥಿಗಳೇ ಸಂಕಲ್ಪ ಎಂಬ ಪುಸ್ತಕದಲ್ಲಿ ದಾಖಲಿಸುತ್ತಾರೆ. ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ನಿರ್ಮಲಾ ಗಣಪತಿ ಭಟ್ ವಿದ್ಯಾರ್ಥಿಗಳಿಗೆ ಓದು ಸಂಸ್ಕಾರ ಮತ್ತು ಪುಸ್ತಕ ಪ್ರೀತಿಯನ್ನು ಹಂಚುವಲ್ಲಿ ತಮ್ಮ ಶ್ರಮ ಮತ್ತು ಶ್ರದ್ಧೆಯನ್ನು ವಿನಿಯೋಗಿಸಿರುವುದು ಪ್ರಶಂಸೆಗೆ ಪಾತ್ರವಾಯಿತು




Friday, March 1, 2019

ವಿಜ್ಞಾನ ದಿನವನ್ನು ಹಬ್ಬವಾಗಿಸಿದ ಮಕ್ಕಳು

ವಿಜ್ಞಾನ ಎಂದರೆ ಮತ್ತೇನು?   ಕೌತುಕಪ್ರಶ್ನೆಅನುಮಾನ ಅಷ್ಟೇ ಪ್ರಶ್ನೆ,ಅನುಮಾನಗಳ ಪರಿಣಾಮವಾಗಿ ಕೆಲವು   ಉತ್ತರಗಳು ಸಿಕ್ಕರೂ ಸಿಗಬಹುದುಹಾಗೆ ಸಿಕ್ಕ ಉತ್ತರಗಳಿಗೂ ಪ್ರಶ್ನೆಗಳ ಕಾಟ ತಪ್ಪಿದ್ದಲ್ಲ. ಪ್ರತಿದಿನವೂ ವಿಜ್ಞಾನದಿನವಾಗುವ ಬೀಜವೊಂದು ಈ ದಿನವೇ ಮೊಳಕೆಯೊಡೆಯಬೇಕು. ಪ್ರಶ್ನಿಸುವ, ಕುತೂಹಲದಿಂದ ಕಣ್ಣರಳಿಸುವ ಅವಕಾಶವನ್ನು ಒದಗಿಸುವ ದಿನವಾಗಿ ಅನುದಿನವೂ ವಿಜ್ಞಾನ ದಿನವು ಆಚರಿಸಲ್ಪಡಬೇಕು. 

ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಸಂಭ್ರಮಾಚರಣೆಯಾಗಷ್ಟೇ ಸರಿದುಹೋಗಬಾರದು ಎಂಬ ಕಾಳಜಿಯಿಂದ ನಮ್ಮ ಶಾಲೆಯಲ್ಲಿ ವಿಜ್ಞಾನದಿನವನ್ನು ಮಕ್ಕಳೇ ರೂಪಿಸಿದ ವಿಜ್ಞಾನ ಪ್ರಯೋಗಗಳು/ಮಾದರಿಗಳ ಪ್ರದರ್ಶನವನ್ನು ಏರ್ಪಡಿಸುವ  ಮೂಲಕ ಆಚರಿಸಲಾಯಿತು.
ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ತಮ್ಮ ಪ್ರಯೋಗ ಕೈಕೊಟ್ಟದ್ದಕ್ಕೆ ಕಾರಣ ಹುಡುಕತ್ತಲೋಮಾಡಿದ ಪ್ರಯೋಗಕ್ಕೆ ನೀಡಬೇಕಾದ ವಿವರಣೆ ತಿಳಿಯದೆ ಬಾಯ್ತೊದಲುತ್ತಲೋಒಡೆದ ಬಲೂನಿಗೆ ಚೆಲ್ಲಿದ ನೀರಿಗೆ ತಲೆಕೆಡಿಸಿಕೊಳ್ಳುತ್ತಲೋ ಇಡೀ ಶಾಲೆಯನ್ನು ಗದ್ದಲದ ಸಂತೆಯಾಗಿಸಿ ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.
ಇದೇ ದಿನ ನಿವೃತ್ತಿಯಾಗುತ್ತಿರುವ ವಿಜ್ಞಾನ ಶಿಕ್ಷಕರಾದ ಶ್ರೀ ಕಾಳಿದಾಸ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು ನಲವತ್ತೈದು ಪ್ರಯೋಗ/ ಮಾದರಿಗಳು ಪ್ರದರ್ಶಿಸಲ್ಪಟ್ಟವು.. 
For further reading-
ವಿಜ್ಞಾನ ದಿನ:ಕ್ಲಿಕ್ ಮಾಡಿ 


 









x

ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.

   ಫೆಬ್ರವರಿ 28ನೇ ತಾರೀಖನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.  ಸರ್ ಸಿ.ವಿ ರಾಮನ್‍ರು ರಾಮನ್ ಪರಿಣಾಮ ಎಂಬ ಹೆಸರಿನಲ್ಲಿ ಪ್ರಖ್ಯಾತವಾದ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ ದಿನವಿದು.      ರಾಮನ್ ಹುಟ್ಟಿದ್ದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಾದರೂ ರಾಮನ್‍ರ ತಂದೆ ಚಂದ್ರಶೇಖರನ್ ಅಯ್ಯರ್ ಅವರಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ದಿವ್ಯ ನಿರಾಸಕ್ತಿಯಿತ್ತು. ಗಣಿತದ ಉಪನ್ಯಾಸಕರಾದ ಅವರು ಕೆಲಸವನ್ನೇ ಧರ್ಮವೆಂದು ಭಾವಿಸಿದ್ದರು. ರಾಮನ್ ತನ್ನ ಅಪ್ಪನ  ಈ ಗುಣವನ್ನೂ ಮತ್ತು ಅವರ ಕಾಲೇಜು ಲೈಬ್ರರಿಯ ಭೌತಶಾಸ್ತ್ರದ ಪುಸ್ತಕಗಳನ್ನೂ ಹಂಚಿಕೊಂಡು ಬೆಳೆದರು. ತನ್ನ ಹದಿನೈದನೆಯ ವಯಸ್ಸಿನಲ್ಲೇ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಿನ್ನದ ಪದಕಗಳೊಂದಿಗೆ ಪದವಿ ಪಡೆದರು. ರಾಮನ್ ಪ್ರೆಸಿಡೆನ್ಸಿ ಕಾಲೇಜಿನಲ್ಲೇ ತನ್ನ ಸ್ನಾತಕೋತ್ತರ ವ್ಯಾಸಂಗವನ್ನು ಮುಂದುವರಿಸಿದರು. ಅಲ್ಲಿನ ವಾಚನಾಲಯ ಮತ್ತು ಪ್ರಯೋಗಾಲಯಗಳನ್ನು ತಡರಾತ್ರಿಯವರೆಗೂ ಬಳಸುವ ಅವಕಾಶ ಪಡೆದರು. ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಬೆಳಕಿನ ವಿವರ್ತನೆಯ ಕುರಿತು ಫಿಲೊಸೋಫಿಕಲ್ ಮ್ಯಾಗಜಿನ್‍ನಲ್ಲಿ ರಾಮನ್‍ರ ಲೇಖನ ಪ್ರಕಟವಾಯಿತು. ಅವರ ಎರಡನೇ ಲೇಖನ ಅದೇ ಮ್ಯಾಗಜಿನ್ ನಲ್ಲಿ ಪ್ರಕಟವಾದಾಗ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಲಾರ್ಡ್ ರೇಲೇ ರಾಮನ್‍ರಿಗೆ ಪತ್ರ ಬರೆದರು. ರಾಮನ್ ಒಬ್ಬ ವಿದ್ಯಾರ್ಥಿ ಎಂದು ತಿಳಿಯದೇ ಅವರನ್ನು ಪ್ರೊಫೆಸರ್ ಎಂದು ಸಂಬೋಧಿಸಿದ್ದರು. ಇದೇ ರೇಲೇ ಎಂಬ ವಿಜ್ಞಾನಿಯೇ ಆಕಾಶದ ಬಣ್ಣ ನೀಲೇಯೇ ಏಕೆ ಎಂಬ ಬಗ್ಗೆ ಮೊದಲಬಾರಿಗೆ ವೈಜ್ಞಾನಿಕ ವಿವರಣೆ ನೀಡಿದವರು. ರೇಲೇ ಚದರುವಿಕೆಯ ಸಿದ್ಧಾಂತದ ಪ್ರಕಾರ ಭೂಮಿಗೆ ವಾತಾವರಣ ಇಲ್ಲದೇ ಇದ್ದಿದ್ದರೆ ಕಪ್ಪು ಆಕಾಶ ಮತ್ತು ಬಿಳಿ ಸೂರ್ಯ ಇರುತ್ತಿದ್ದವು. ಆದರೆ, ವಾತಾವರಣ ಇದೆ ನೋಡಿ- ಬೆಳಕಿನ ಕಿರಣಗಳು ನೇರ ಸೂರ್ಯನಿಂದ ನಮ್ಮ ಕಣ್ಣಿಗೆ ಬರುವ ಬದಲು ಪ್ರತಿ ಅಣುವಿಗೂ ಡಿಕ್ಕಿ ಹೊಡೆದು ಚದರುತ್ತವೆ. ನೀಲಿ ಬಣ್ಣದ ಬೆಳಕು ಅತಿ ಹೆಚ್ಚು ಚದರುವುದರಿಂದ ನಮಗೆ ನೀಲಿ ಆಕಾಶ ಕಾಣುತ್ತದೆ. ಹಳದಿ ಮತ್ತು ಕೆಂಪು ಬಣ್ಣದ ಕಿರಣಗಳ ಚದರುವಿಕೆ ಕಡಿಮೆ. ಅದಕ್ಕೇ ಸೂರ್ಯ ಹಳದಿ; ಕೆಲವೊಮ್ಮೆ ಕೆಂಪು. ರೇಲೇ ಚದುರುವಿಕೆಯಲ್ಲಿ ಬೆಳಕು ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ, ಈ ಸ್ಥಿತಿಸ್ಥಾಪಕ ಚದುರುವಿಕೆಯಲ್ಲಿ ಬೆಳಕಿನ ಕಿರಣಗಳ ಬಣ್ಣ ಬದಲಾಗುವುದಿಲ್ಲ.       ಆಕಾಶದ ನೀಲಿಯನ್ನು ಸಮುದ್ರವು ಪ್ರತಿಫಲಿಸುತ್ತದೆ ಎಂದಿದ್ದರು ರೇಲೇ. ರಾಮನ್ 1921 ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ನಡೆಯುವ ವಿಶ್ವವಿದ್ಯಾನಿಲಯಗಳ ಸಮಾವೇಶಕ್ಕಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸುತ್ತಿರುವಾಗ ಸಮುದ್ರದ ಸುಂದರ ನೀಲಿ ಬಣ್ಣವನ್ನು ತದೇಕಚಿತ್ತದಿಂದ ನೋಡಿದರು. ಸಮುದ್ರದ ನೀಲಿ ಬಣ್ಣದ ಕುರಿತು ರೇಲೇಯವರ ವಿವರಣೆಯ ಬಗ್ಗೆ ರಾಮನ್‍ರಿಗೆ ಏಕೋ ಅನುಮಾನ ಉಂಟಾಯಿತು. ಇಂತಹ ಅನುಮಾನಗಳೇ ಅಲ್ಲವೇ ವಿಜ್ಞಾನವನ್ನು ಮುನ್ನಡೆಸುವುದು? ರಾಮನ್ ಭಾರತಕ್ಕೆ ಮರಳಿ ಪ್ರಯೋಗಗಳನ್ನು ಮುಂದುವರಿಸಿದರು. ರೇಲೆಯವರ ವಿವರಣೆಗಳು ಸಂಪೂರ್ಣವಾಗಿ ಒಪ್ಪಕೊಳ್ಳಲಾಗದೆಂದು ನೇಚರ್ ಪತ್ರಿಕೆಯಲ್ಲಿ ಬರೆದರು. ಮುಂದೆ, 1927 ರಲ್ಲಿ ಅರ್ಥರ್ ಕ್ರಾಂಪ್ಟನ್ ಎಕ್ಸ್ ಕಿರಣಗಳ ವ್ಯಾಪ್ತಿಯ ವಿದ್ಯುತ್ಕಾಂತೀಯ ಕಿರಣಗಳ ಸ್ಥಿತಿಸ್ಥಾಪಕವಲ್ಲದ ಚದರುವಿಕೆಯನ್ನು ಗುರುತಿಸಿ ನೊಬೆಲ್ ಗೌರವವನ್ನು ಪಡೆದರು. ರಾಮನ್ ತನ್ನ ತಂಡದೊಂದಿಗೆ ಸಂಶೋಧನೆಗಳನ್ನು ಮುಂದುವರಿಸಿದರು. ಸೂರ್ಯನ ಬೆಳಕಿನಿಂದ ಏಕವರ್ಣೀಯ ಕಿರಣಗಳನ್ನು ಪಡೆದುಕೊಂಡು ಅನೇಕ ದ್ರವಗಳ ಮೂಲಕ ಹಾಯಿಸಿದರು. ಪರಿಣಾಮವನ್ನು ವೀಕ್ಷಿಸಿದರು. ನೀಲಿ ಕಿರಣವನ್ನು ಗ್ಲಿಸರಿನ್ ಮೂಲಕ ಹಾಯಿಸಿದಾಗ ಹಸಿರು ಕಿರಣಗಳು ಹೊರಬಂದವು. ತನ್ನನ್ನು ತಪ್ಪಾಗಿ ಪ್ರೊಫೆಸರ್ ಎಂದು ಹಿಂದೊಮ್ಮೆ ಭಾವಿಸಿದ್ದ ಲಾರ್ಡ್ ರೇಲೇ ಯವರನ್ನು ಈಗ ಮತ್ತೊಮ್ಮೆ ರಾಮನ್ ತಪ್ಪೆಂದು ಸಾಬೀತುಪಡಿಸಿದರು. ಶಾಸ್ತ್ರೀಯ ಭೌತಶಾಸ್ತ್ರದ ಯೋಚನಾ ವಿಧಾನಗಳನ್ನು ಬದಲಿಸಿದ ಕ್ವಾಂಟಮ್ ಸಿದ್ಧಾಂತವನ್ನು ರಾಮನ್‍ರ ಸಂಶೋಧನೆ ಸಮರ್ಥಿಸಿತು.    ಯಾವುದೇ ಅಣುವಿನ ಮೇಲೆ ಬೆಳಕು ಬಿದ್ದಾಗ ಆ ಬೆಳಕಿನ ಸ್ವಲ್ಪ ಶಕ್ತಿಯನ್ನು ಅಣುವು ಹೀರಿಕೊಳ್ಳುತ್ತದೆ. ಹೀಗೆ ತನ್ನ ಶಕ್ತಿಯನ್ನು ಆ ಅಣುವಿಗೆ ನೀಡಿದ ಬೆಳಕಿನ ಬಣ್ಣದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ. ಹೀರಿಕೊಂಡ ಅಣುವಿನ ಕಂಪನದಲ್ಲೂ ಬದಲಾವಣೆಯಾಗುತ್ತದೆ. ಅಣುವಿನ ಮೂಲಕ ಹಾದುಬಂದ ಬೆಳಕಿನ ಬಣ್ಣದಲ್ಲಾದ ಬದಲಾವಣೆಯು ಆ ಅಣುವಿನ ಬೆರಳಚ್ಚು ಇದ್ದ ಹಾಗೆ- ನಿರ್ದಿಷ್ಟ ಅಣುವಿಗೆ ಸಂವಾದಿಯಾಗಿ ನಿರ್ದಿಷ್ಟ ತರಂಗಾಂತರದ ಬೆಳಕು ಹೊರಬರುತ್ತದೆ. ರಾಮನ್ ಪರಿಣಾಮದ ಮಹತ್ವ ಇರುವುದು ಅದರ ಉಪಯೋಗದಲ್ಲಿ. ವಸ್ತುವಿಶ್ಲೇಷಣೆ ವಿಜ್ಞಾನ ಮತ್ತು ರೋಗನಿದಾನ ಶಾಸ್ತ್ರದಲ್ಲಿ ಇಂದು ರಾಮನ್ ರೋಹಿತ ದರ್ಶಕವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ರಾಮನ್ ಪರಿಣಾಮದ ಸರಳವಾದ ವಿವರಣೆ.   ರಾಮನ್ ಪರಿಣಾಮವು ಭೌತಶಾಸ್ತ್ರದ ಬೆಳವಣಿಗೆಯಲ್ಲಿ ಎಷ್ಟು ದೊಡ್ಡ ಘಟನೆಯೋ ಭಾರತದ ಸಂಶೋಧನಾ ರಂಗದಲ್ಲೂ ಅಷ್ಟೇ ದೊಡ್ಡ ಘಟನೆ. ಹಿಂದೊಮ್ಮೆ, ಸಂಶೋಧನೆಗೆ ಭಾರತದಲ್ಲಿ ಅವಕಾಶ ಕಡಿಮೆ ಎಂದು ಭಾವಿಸಿ ಹತ್ತು ವರ್ಷಗಳ ಕಾಲ ಹಣಕಾಸು ಆಡಳಿತ ಸೇವೆಯಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನ್ ಮುಂದೆ ಸ್ವಂತದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಅವರನ್ನು ಕೊಂಡೊಯ್ದಿತು. ರಾಮನ್ನರಿಗೆ ತನ್ನ ಸಂಶೋಧನೆಯ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಎಷ್ಟು ವಿಶ್ವಾಸವಿತ್ತೆಂದರೆ ನೊಬೆಲ್ ಪ್ರಶಸ್ತಿ ಪ್ರಕಟವಾಗುವ ನಾಲ್ಕು ತಿಂಗಳ ಮುಂಚೆಯೇ ಸ್ವೀಡನ್ನಿಗೆ ತೆರಳಲು ಟಿಕೆಟ್ ಖರೀದಿಸಿದ್ದರು ಅವರು! ಕಲ್ಕತ್ತಾ ವಿಶ್ವವಿದ್ಯಾಲಯದ ಪಾಲಿತ್ ಪೀಠವನ್ನು ಅಲಂಕರಿಸಿದಾಗ ಅವರನ್ನು ಹೊರದೇಶಗಳಲ್ಲೂ ಸಂಶೋದನೆ ಮುಂದುವರಿಸಲು ಕೇಳಲಾಯಿತು. ರಾಮನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಬೇರೇ ದೇಶದಿಂದ ತನ್ನನ್ನು ಹುಡುಕಿ ಬರಬೇಕೆಂದರು. ವೈಜ್ಞಾನಿಕ ಸಂಶೋಧನೆಯ ಕುರಿತು ಸರ್ಕಾರದ ನಿಲುಮೆ ಮತ್ತು ನಿಷ್ಠೆಯ ಬಗ್ಗೆ ರಾಮನ್ನರಿಗೆ ನಂಬಿಕೆ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಹೊಸತರಲ್ಲೇ ಅವರು ರಾಮನ್ ರಿಸರ್ಚ್ ಸೆಂಟರ್ ಆರಂಭಿಸಿದರು. ಶುದ್ಧ ವಿಜ್ಞಾನದ ಬೆಳವಣಿಗೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದೆಂದು ಅವರು ಸರ್ಕಾರದ ಅನುದಾನಗಳನ್ನು ನಿರಾಕರಿಸಿದರು. ಸೌಲಭ್ಯಗಳ ಕೊರತೆ ಸಂಶೋಧನೆಗೆ ತೊಡಕಾಗದು ಎಂಬುದನ್ನು ರಾಮನ್ ಸಾಧಿಸಿ ತೋರಿಸಿದರು. ಇನ್ನೂರು ರೂಪಾಯಿಗೂ ಕಡಿಮೆ ವೆಚ್ಚದಲ್ಲಿ ತಾನೇ ತಯಾರಿಸಿದ ಉಪಕರಣದ ಸಹಾಯದಿಂದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಅವರ ಪ್ರಕಾರ ಸ್ವತಂತ್ರ ಚಿಂತನೆ ಮತ್ತು ಕಠಿಣ ಪರಿಶ್ರಮ ಇದ್ದರೆ ಎಲ್ಲವೂ ಸಾಧ್ಯ.    ಭಾರತದಲ್ಲೇ ಹುಟ್ಟಿದ ರೋನೊಲ್ಡ್ ರಾಸ್, ಭಾರತ ಮೂಲದ ಹರಗೋಬಿಂದ ಖೋರಾನಾ, ಎಸ್. ಚಂದ್ರಶೇಖರ, ವೆಂಕಟರಾಮನ್ ರಾಮಕೃಷ್ಣನ್ ನೊಬೆಲ್ ಪ್ರಶಸ್ತಿ ಪಡೆದುಕೊಂಡರಾದರೂ ಭಾರತದ ಪ್ರಜೆಯೊಬ್ಬರಿಗೆ ವಿಜ್ಞಾನ ಸಂಶೋಧನೆಗಾಗಿ ಏಕಮಾತ್ರ ನೊಬೆಲ್ ಪ್ರಶಸ್ತಿಯು ದೊರೆತದ್ದು ರಾಮನ್‍ರ ಮೂಲಕವೇ! ಲಾರ್ಡ್ ರೇಲೆಯಂತಹ ಮಹಾನ್ ವಿಜ್ಞಾನಿಯನ್ನು ಪ್ರಶ್ನೆ ಮತ್ತು ಅನುಮಾನದ ಮೂಲಕ ಸ್ವೀಕರಿಸಿದ್ದರಿಂದಲೇ ರಾಮನ್ ಹುಟ್ಟಿದರುವಿಜ್ಞಾನ ಎಂದರೆ ಮತ್ತೇನು?  ಕೌತುಕಪ್ರಶ್ನೆಅನುಮಾನ ಅಷ್ಟೇ ಪ್ರಶ್ನೆ,ಅನುಮಾನಗಳ ಪರಿಣಾಮವಾಗಿ ಕೆಲವು ಉತ್ತರಗಳು ಸಿಕ್ಕರೂ ಸಿಗಬಹುದುಹಾಗೆ ಸಿಕ್ಕ ಉತ್ತರಗಳಿಗೂ ಪ್ರಶ್ನೆಗಳ ಕಾಟ ತಪ್ಪಿದ್ದಲ್ಲ.    ಪ್ರತಿದಿನವೂ ವಿಜ್ಞಾನದಿನವಾಗುವ ಬೀಜವೊಂದು ಈ ದಿನವೇ ಮೊಳಕೆಯೊಡೆಯಬೇಕು. ಪ್ರಶ್ನಿಸುವ, ಕುತೂಹಲದಿಂದ ಕಣ್ಣರಳಿಸುವ ಅವಕಾಶವನ್ನು ಒದಗಿಸುವ ದಿನವಾಗಿ ಅನುದಿನವೂ ವಿಜ್ಞಾನ ದಿನವು ಆಚರಿಸಲ್ಪಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಸ್ಮರಣೆ ಆಧರಿತ ಕಲಿಕೆಯ ವಿಧಾನಗಳನ್ನೇ ನೆಚ್ಚಿಕೊಂಡಿದೆ. ಮಗುವಿನ ಕುತೂಹಲ, ಕುತೂಹಲದ ಉತ್ಪನ್ನವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಹುಡುಕಿಕೊಳ್ಳಬಲ್ಲ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿಲ್ಲ.  ಪ್ರಜಾಸತ್ತಾತ್ಮಕವಲ್ಲದ ತರಗತಿಕೋಣೆಯಲ್ಲಿ ವೈಜ್ಞಾನಿಕ ಮನೋಧರ್ಮವಾಗಲಿ ಅದರ ಪ್ರಕಟರೂಪವಾದ ತಾರ್ಕಿಕ ಚಿಂತನೆ, ಸಹನೆ, ಭಿನ್ನಾಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಸ್ವಭಾವ, ಪೂರ್ವಾಗ್ರಹಗಳಿಂದ ಮುಕ್ತವಾದ ಚಿಂತನಾಕ್ರಮ, ತಂಡವಾಗಿ ಕಾರ್ಯನಿರ್ವಹಿಸುವ ಆಸಕ್ತಿಯನ್ನು ಬೆಳಸಲು ಸಾಧ್ಯವಿಲ್ಲ.  

ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಸಂಭ್ರಮಾಚರಣೆಯಾಗಷ್ಟೇ ಸರಿದುಹೋಗಬಾರದು ಎಂಬ ಕಾಳಜಿಯಿಂದ ನಮ್ಮ ಶಾಲೆಯಲ್ಲಿ ವಿಜ್ಞಾನದಿನವನ್ನು ಮಕ್ಕಳೇ ರೂಪಿಸಿದ ವಿಜ್ಞಾನ ಪ್ರಯೋಗಗಳು/ಮಾದರಿಗಳ ಪ್ರದರ್ಶನವನ್ನು ಏರ್ಪಡಿಸುವ  ಮೂಲಕ ಆಚರಿಸಲಾಯಿತು
   ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ತಮ್ಮ ಪ್ರಯೋಗ ಕೈಕೊಟ್ಟದ್ದಕ್ಕೆ ಕಾರಣ ಹುಡುಕತ್ತಲೋಮಾಡಿದ ಪ್ರಯೋಗಕ್ಕೆ ನೀಡಬೇಕಾದ ವಿವರಣೆ ತಿಳಿಯದೆ ಬಾಯ್ತೊದಲುತ್ತಲೋಒಡೆದ ಬಲೂನಿಗೆ ಚೆಲ್ಲಿದ ನೀರಿಗೆ ತಲೆಕೆಡಿಸಿಕೊಳ್ಳುತ್ತಲೋ ಇಡೀ ಶಾಲೆಯನ್ನು ಗದ್ದಲದ ಸಂತೆಯಾಗಿಸಿ ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.

Monday, February 18, 2019

ಪರೀಕ್ಷೆಯು ಸಂಭ್ರಮವಾಗಲಿ!


ಬೆಸ್ಟ್ ಆಫ್ ಲಕ್ ಎಸ್. ಎಸ್. ಎಲ್. ಸಿ ಮಕ್ಕಳೇ! ಪರೀಕ್ಷೆಯು ಸಂಭ್ರಮವಾಗಲಿ!
ಹರಿಪ್ರಸಾದ್ ಸರ್ ಬರೀತಾರೆ..
ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ
§ ಸಂತೋಷವಾಗಿದ್ದಾಗ ನಾವು ಹೆಚ್ಚು ಕೆಲಸಮಾಡಬಲ್ಲೆವು§  ಮನಸ್ಸು ಶಾಂತಿಯಿಂದಿರಲಿ!§  ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ

§  ಎಲ್ಲ ಪ್ರಶ್ನೆಗಳನ್ನೂ ಓದಿಕೊಳ್ಳಿ§  ಕನಿಷ್ಠ 20 ಪ್ರಶ್ನೆಗಳಿಗೆ ಉತ್ತರ ಗೊತ್ತಿದೆಯೆಂದರೆ ಸಂತೋಷಪಡಿ§  ಉಳಿದ ಪ್ರಶ್ನೆಗಳಿಗೆ ಉತ್ತರ ಹೊಳೆಯುತ್ತಾ ಹೋಗುತ್ತದೆ.