Saturday, June 8, 2019

ಶಾಲಾ ಪ್ರಾರಂಭೋತ್ಸವ :ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ

ಶಾಲಾ ಪ್ರಾರಂಭೋತ್ಸವ :
29 ಮೇ 2019
 ಕಾರ್ಕಳ ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿಯ ಶಾಲಾ ಪ್ರಾರಂಭೋತ್ಸವವನ್ನು ಈ ದಿನ ಆಚರಿಸಲಾಯ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯರಾಜ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಐ.ಟಿ. ಮಣಿಪಾಲ ಇಲ್ಲಿನ ಪ್ರಾಧ್ಯಾಪಕರಾದ ಡಾ|| ಶ್ರೀಹರಿ ಉಪಾಧ್ಯಾಯ ಅವರು “ವಿದ್ಯಾರ್ಥಿಗಳು ಪ್ರತಿ ಗಳಿಗೆಯ ಅನುಭವವನ್ನು ಪಡೆಯುತ್ತಾ ಬೆಳೆಯಬೇಕು. ಜಗತ್ತನ್ನು ಚಿಕ್ಕಪುಟ್ಟ ಸಂಗತಿಗಳ ಮೂಲಕವೇ ಅರಿಯಬೇಕು” ಎಂದರು.


ಸರ್ಕಾರದಿಂದ ಪೂರೈಕೆಯಾದ ಉಚಿತ ಪಠ್ಯಪುಸ್ತಕಗಳನ್ನು ಪುರಸಭೆಯ ಸದಸ್ಯರಾದ ಶ್ರೀ ಪ್ರದೀಪ ರಾಣೆ ವಿತರಿಸಿದರು. ಮುಖ್ಯಶಿಕ್ಷಕಿ ಶ್ರೀಮತಿ ಹರ್ಷಿಣಿ ಜೈನ್ ಇವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್‍ಪುಸ್ತಕಗಳನ್ನು ಅತಿಥಿಗಳಾದ ಶ್ರೀ ಶೇಖ್ ಮುಸ್ತಾಫ್ ಶುಕೂರ್ ವಿತರಿಸಿದರು. ಅತಿಥಿಗಳಾಗಿ ಶ್ರೀ ಸತೀಶ ಮಡಿವಾಳ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ನಿರ್ಮಲಾಭಟ್ ಸ್ವಾಗತಿಸಿದರು. ಜಾನ್ ಮೆನೇಜಸ್ ಧನ್ಯವಾದ ಸಲ್ಲಿಸಿದರು.

Friday, April 5, 2019

-ಗಂಗಾ ಮಾತಾ ಸಾಹಿತ್ಯ ಸಂಘ - ಪುಸ್ತಕ ಪ್ರದರ್ಶನ



ಶಾಲೆಯ ಗ್ರಂಥಾಲಯವನ್ನು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಓದುವುದಲ್ಲದೆ ತಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕಗಳ ಕುರಿತು ಅಭಿಪ್ರಾಯ ಸಂಗ್ರಹಿಸಿ ವಿದ್ಯಾರ್ಥಿಗಳೇ ಸಂಕಲ್ಪ ಎಂಬ ಪುಸ್ತಕದಲ್ಲಿ ದಾಖಲಿಸುತ್ತಾರೆ. ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ನಿರ್ಮಲಾ ಗಣಪತಿ ಭಟ್ ವಿದ್ಯಾರ್ಥಿಗಳಿಗೆ ಓದು ಸಂಸ್ಕಾರ ಮತ್ತು ಪುಸ್ತಕ ಪ್ರೀತಿಯನ್ನು ಹಂಚುವಲ್ಲಿ ತಮ್ಮ ಶ್ರಮ ಮತ್ತು ಶ್ರದ್ಧೆಯನ್ನು ವಿನಿಯೋಗಿಸಿರುವುದು ಪ್ರಶಂಸೆಗೆ ಪಾತ್ರವಾಯಿತು




Friday, March 1, 2019

ವಿಜ್ಞಾನ ದಿನವನ್ನು ಹಬ್ಬವಾಗಿಸಿದ ಮಕ್ಕಳು

ವಿಜ್ಞಾನ ಎಂದರೆ ಮತ್ತೇನು?   ಕೌತುಕಪ್ರಶ್ನೆಅನುಮಾನ ಅಷ್ಟೇ ಪ್ರಶ್ನೆ,ಅನುಮಾನಗಳ ಪರಿಣಾಮವಾಗಿ ಕೆಲವು   ಉತ್ತರಗಳು ಸಿಕ್ಕರೂ ಸಿಗಬಹುದುಹಾಗೆ ಸಿಕ್ಕ ಉತ್ತರಗಳಿಗೂ ಪ್ರಶ್ನೆಗಳ ಕಾಟ ತಪ್ಪಿದ್ದಲ್ಲ. ಪ್ರತಿದಿನವೂ ವಿಜ್ಞಾನದಿನವಾಗುವ ಬೀಜವೊಂದು ಈ ದಿನವೇ ಮೊಳಕೆಯೊಡೆಯಬೇಕು. ಪ್ರಶ್ನಿಸುವ, ಕುತೂಹಲದಿಂದ ಕಣ್ಣರಳಿಸುವ ಅವಕಾಶವನ್ನು ಒದಗಿಸುವ ದಿನವಾಗಿ ಅನುದಿನವೂ ವಿಜ್ಞಾನ ದಿನವು ಆಚರಿಸಲ್ಪಡಬೇಕು. 

ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಸಂಭ್ರಮಾಚರಣೆಯಾಗಷ್ಟೇ ಸರಿದುಹೋಗಬಾರದು ಎಂಬ ಕಾಳಜಿಯಿಂದ ನಮ್ಮ ಶಾಲೆಯಲ್ಲಿ ವಿಜ್ಞಾನದಿನವನ್ನು ಮಕ್ಕಳೇ ರೂಪಿಸಿದ ವಿಜ್ಞಾನ ಪ್ರಯೋಗಗಳು/ಮಾದರಿಗಳ ಪ್ರದರ್ಶನವನ್ನು ಏರ್ಪಡಿಸುವ  ಮೂಲಕ ಆಚರಿಸಲಾಯಿತು.
ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ತಮ್ಮ ಪ್ರಯೋಗ ಕೈಕೊಟ್ಟದ್ದಕ್ಕೆ ಕಾರಣ ಹುಡುಕತ್ತಲೋಮಾಡಿದ ಪ್ರಯೋಗಕ್ಕೆ ನೀಡಬೇಕಾದ ವಿವರಣೆ ತಿಳಿಯದೆ ಬಾಯ್ತೊದಲುತ್ತಲೋಒಡೆದ ಬಲೂನಿಗೆ ಚೆಲ್ಲಿದ ನೀರಿಗೆ ತಲೆಕೆಡಿಸಿಕೊಳ್ಳುತ್ತಲೋ ಇಡೀ ಶಾಲೆಯನ್ನು ಗದ್ದಲದ ಸಂತೆಯಾಗಿಸಿ ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.
ಇದೇ ದಿನ ನಿವೃತ್ತಿಯಾಗುತ್ತಿರುವ ವಿಜ್ಞಾನ ಶಿಕ್ಷಕರಾದ ಶ್ರೀ ಕಾಳಿದಾಸ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು ನಲವತ್ತೈದು ಪ್ರಯೋಗ/ ಮಾದರಿಗಳು ಪ್ರದರ್ಶಿಸಲ್ಪಟ್ಟವು.. 
For further reading-
ವಿಜ್ಞಾನ ದಿನ:ಕ್ಲಿಕ್ ಮಾಡಿ 


 









x

ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.

   ಫೆಬ್ರವರಿ 28ನೇ ತಾರೀಖನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.  ಸರ್ ಸಿ.ವಿ ರಾಮನ್‍ರು ರಾಮನ್ ಪರಿಣಾಮ ಎಂಬ ಹೆಸರಿನಲ್ಲಿ ಪ್ರಖ್ಯಾತವಾದ ತಮ್ಮ ಸಂಶೋಧನೆಯನ್ನು ಪ್ರಕಟಿಸಿದ ದಿನವಿದು.      ರಾಮನ್ ಹುಟ್ಟಿದ್ದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಾದರೂ ರಾಮನ್‍ರ ತಂದೆ ಚಂದ್ರಶೇಖರನ್ ಅಯ್ಯರ್ ಅವರಿಗೆ ಧಾರ್ಮಿಕ ಆಚರಣೆಗಳ ಬಗ್ಗೆ ದಿವ್ಯ ನಿರಾಸಕ್ತಿಯಿತ್ತು. ಗಣಿತದ ಉಪನ್ಯಾಸಕರಾದ ಅವರು ಕೆಲಸವನ್ನೇ ಧರ್ಮವೆಂದು ಭಾವಿಸಿದ್ದರು. ರಾಮನ್ ತನ್ನ ಅಪ್ಪನ  ಈ ಗುಣವನ್ನೂ ಮತ್ತು ಅವರ ಕಾಲೇಜು ಲೈಬ್ರರಿಯ ಭೌತಶಾಸ್ತ್ರದ ಪುಸ್ತಕಗಳನ್ನೂ ಹಂಚಿಕೊಂಡು ಬೆಳೆದರು. ತನ್ನ ಹದಿನೈದನೆಯ ವಯಸ್ಸಿನಲ್ಲೇ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಿನ್ನದ ಪದಕಗಳೊಂದಿಗೆ ಪದವಿ ಪಡೆದರು. ರಾಮನ್ ಪ್ರೆಸಿಡೆನ್ಸಿ ಕಾಲೇಜಿನಲ್ಲೇ ತನ್ನ ಸ್ನಾತಕೋತ್ತರ ವ್ಯಾಸಂಗವನ್ನು ಮುಂದುವರಿಸಿದರು. ಅಲ್ಲಿನ ವಾಚನಾಲಯ ಮತ್ತು ಪ್ರಯೋಗಾಲಯಗಳನ್ನು ತಡರಾತ್ರಿಯವರೆಗೂ ಬಳಸುವ ಅವಕಾಶ ಪಡೆದರು. ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಬೆಳಕಿನ ವಿವರ್ತನೆಯ ಕುರಿತು ಫಿಲೊಸೋಫಿಕಲ್ ಮ್ಯಾಗಜಿನ್‍ನಲ್ಲಿ ರಾಮನ್‍ರ ಲೇಖನ ಪ್ರಕಟವಾಯಿತು. ಅವರ ಎರಡನೇ ಲೇಖನ ಅದೇ ಮ್ಯಾಗಜಿನ್ ನಲ್ಲಿ ಪ್ರಕಟವಾದಾಗ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಲಾರ್ಡ್ ರೇಲೇ ರಾಮನ್‍ರಿಗೆ ಪತ್ರ ಬರೆದರು. ರಾಮನ್ ಒಬ್ಬ ವಿದ್ಯಾರ್ಥಿ ಎಂದು ತಿಳಿಯದೇ ಅವರನ್ನು ಪ್ರೊಫೆಸರ್ ಎಂದು ಸಂಬೋಧಿಸಿದ್ದರು. ಇದೇ ರೇಲೇ ಎಂಬ ವಿಜ್ಞಾನಿಯೇ ಆಕಾಶದ ಬಣ್ಣ ನೀಲೇಯೇ ಏಕೆ ಎಂಬ ಬಗ್ಗೆ ಮೊದಲಬಾರಿಗೆ ವೈಜ್ಞಾನಿಕ ವಿವರಣೆ ನೀಡಿದವರು. ರೇಲೇ ಚದರುವಿಕೆಯ ಸಿದ್ಧಾಂತದ ಪ್ರಕಾರ ಭೂಮಿಗೆ ವಾತಾವರಣ ಇಲ್ಲದೇ ಇದ್ದಿದ್ದರೆ ಕಪ್ಪು ಆಕಾಶ ಮತ್ತು ಬಿಳಿ ಸೂರ್ಯ ಇರುತ್ತಿದ್ದವು. ಆದರೆ, ವಾತಾವರಣ ಇದೆ ನೋಡಿ- ಬೆಳಕಿನ ಕಿರಣಗಳು ನೇರ ಸೂರ್ಯನಿಂದ ನಮ್ಮ ಕಣ್ಣಿಗೆ ಬರುವ ಬದಲು ಪ್ರತಿ ಅಣುವಿಗೂ ಡಿಕ್ಕಿ ಹೊಡೆದು ಚದರುತ್ತವೆ. ನೀಲಿ ಬಣ್ಣದ ಬೆಳಕು ಅತಿ ಹೆಚ್ಚು ಚದರುವುದರಿಂದ ನಮಗೆ ನೀಲಿ ಆಕಾಶ ಕಾಣುತ್ತದೆ. ಹಳದಿ ಮತ್ತು ಕೆಂಪು ಬಣ್ಣದ ಕಿರಣಗಳ ಚದರುವಿಕೆ ಕಡಿಮೆ. ಅದಕ್ಕೇ ಸೂರ್ಯ ಹಳದಿ; ಕೆಲವೊಮ್ಮೆ ಕೆಂಪು. ರೇಲೇ ಚದುರುವಿಕೆಯಲ್ಲಿ ಬೆಳಕು ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ, ಈ ಸ್ಥಿತಿಸ್ಥಾಪಕ ಚದುರುವಿಕೆಯಲ್ಲಿ ಬೆಳಕಿನ ಕಿರಣಗಳ ಬಣ್ಣ ಬದಲಾಗುವುದಿಲ್ಲ.       ಆಕಾಶದ ನೀಲಿಯನ್ನು ಸಮುದ್ರವು ಪ್ರತಿಫಲಿಸುತ್ತದೆ ಎಂದಿದ್ದರು ರೇಲೇ. ರಾಮನ್ 1921 ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ನಡೆಯುವ ವಿಶ್ವವಿದ್ಯಾನಿಲಯಗಳ ಸಮಾವೇಶಕ್ಕಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸುತ್ತಿರುವಾಗ ಸಮುದ್ರದ ಸುಂದರ ನೀಲಿ ಬಣ್ಣವನ್ನು ತದೇಕಚಿತ್ತದಿಂದ ನೋಡಿದರು. ಸಮುದ್ರದ ನೀಲಿ ಬಣ್ಣದ ಕುರಿತು ರೇಲೇಯವರ ವಿವರಣೆಯ ಬಗ್ಗೆ ರಾಮನ್‍ರಿಗೆ ಏಕೋ ಅನುಮಾನ ಉಂಟಾಯಿತು. ಇಂತಹ ಅನುಮಾನಗಳೇ ಅಲ್ಲವೇ ವಿಜ್ಞಾನವನ್ನು ಮುನ್ನಡೆಸುವುದು? ರಾಮನ್ ಭಾರತಕ್ಕೆ ಮರಳಿ ಪ್ರಯೋಗಗಳನ್ನು ಮುಂದುವರಿಸಿದರು. ರೇಲೆಯವರ ವಿವರಣೆಗಳು ಸಂಪೂರ್ಣವಾಗಿ ಒಪ್ಪಕೊಳ್ಳಲಾಗದೆಂದು ನೇಚರ್ ಪತ್ರಿಕೆಯಲ್ಲಿ ಬರೆದರು. ಮುಂದೆ, 1927 ರಲ್ಲಿ ಅರ್ಥರ್ ಕ್ರಾಂಪ್ಟನ್ ಎಕ್ಸ್ ಕಿರಣಗಳ ವ್ಯಾಪ್ತಿಯ ವಿದ್ಯುತ್ಕಾಂತೀಯ ಕಿರಣಗಳ ಸ್ಥಿತಿಸ್ಥಾಪಕವಲ್ಲದ ಚದರುವಿಕೆಯನ್ನು ಗುರುತಿಸಿ ನೊಬೆಲ್ ಗೌರವವನ್ನು ಪಡೆದರು. ರಾಮನ್ ತನ್ನ ತಂಡದೊಂದಿಗೆ ಸಂಶೋಧನೆಗಳನ್ನು ಮುಂದುವರಿಸಿದರು. ಸೂರ್ಯನ ಬೆಳಕಿನಿಂದ ಏಕವರ್ಣೀಯ ಕಿರಣಗಳನ್ನು ಪಡೆದುಕೊಂಡು ಅನೇಕ ದ್ರವಗಳ ಮೂಲಕ ಹಾಯಿಸಿದರು. ಪರಿಣಾಮವನ್ನು ವೀಕ್ಷಿಸಿದರು. ನೀಲಿ ಕಿರಣವನ್ನು ಗ್ಲಿಸರಿನ್ ಮೂಲಕ ಹಾಯಿಸಿದಾಗ ಹಸಿರು ಕಿರಣಗಳು ಹೊರಬಂದವು. ತನ್ನನ್ನು ತಪ್ಪಾಗಿ ಪ್ರೊಫೆಸರ್ ಎಂದು ಹಿಂದೊಮ್ಮೆ ಭಾವಿಸಿದ್ದ ಲಾರ್ಡ್ ರೇಲೇ ಯವರನ್ನು ಈಗ ಮತ್ತೊಮ್ಮೆ ರಾಮನ್ ತಪ್ಪೆಂದು ಸಾಬೀತುಪಡಿಸಿದರು. ಶಾಸ್ತ್ರೀಯ ಭೌತಶಾಸ್ತ್ರದ ಯೋಚನಾ ವಿಧಾನಗಳನ್ನು ಬದಲಿಸಿದ ಕ್ವಾಂಟಮ್ ಸಿದ್ಧಾಂತವನ್ನು ರಾಮನ್‍ರ ಸಂಶೋಧನೆ ಸಮರ್ಥಿಸಿತು.    ಯಾವುದೇ ಅಣುವಿನ ಮೇಲೆ ಬೆಳಕು ಬಿದ್ದಾಗ ಆ ಬೆಳಕಿನ ಸ್ವಲ್ಪ ಶಕ್ತಿಯನ್ನು ಅಣುವು ಹೀರಿಕೊಳ್ಳುತ್ತದೆ. ಹೀಗೆ ತನ್ನ ಶಕ್ತಿಯನ್ನು ಆ ಅಣುವಿಗೆ ನೀಡಿದ ಬೆಳಕಿನ ಬಣ್ಣದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ. ಹೀರಿಕೊಂಡ ಅಣುವಿನ ಕಂಪನದಲ್ಲೂ ಬದಲಾವಣೆಯಾಗುತ್ತದೆ. ಅಣುವಿನ ಮೂಲಕ ಹಾದುಬಂದ ಬೆಳಕಿನ ಬಣ್ಣದಲ್ಲಾದ ಬದಲಾವಣೆಯು ಆ ಅಣುವಿನ ಬೆರಳಚ್ಚು ಇದ್ದ ಹಾಗೆ- ನಿರ್ದಿಷ್ಟ ಅಣುವಿಗೆ ಸಂವಾದಿಯಾಗಿ ನಿರ್ದಿಷ್ಟ ತರಂಗಾಂತರದ ಬೆಳಕು ಹೊರಬರುತ್ತದೆ. ರಾಮನ್ ಪರಿಣಾಮದ ಮಹತ್ವ ಇರುವುದು ಅದರ ಉಪಯೋಗದಲ್ಲಿ. ವಸ್ತುವಿಶ್ಲೇಷಣೆ ವಿಜ್ಞಾನ ಮತ್ತು ರೋಗನಿದಾನ ಶಾಸ್ತ್ರದಲ್ಲಿ ಇಂದು ರಾಮನ್ ರೋಹಿತ ದರ್ಶಕವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ರಾಮನ್ ಪರಿಣಾಮದ ಸರಳವಾದ ವಿವರಣೆ.   ರಾಮನ್ ಪರಿಣಾಮವು ಭೌತಶಾಸ್ತ್ರದ ಬೆಳವಣಿಗೆಯಲ್ಲಿ ಎಷ್ಟು ದೊಡ್ಡ ಘಟನೆಯೋ ಭಾರತದ ಸಂಶೋಧನಾ ರಂಗದಲ್ಲೂ ಅಷ್ಟೇ ದೊಡ್ಡ ಘಟನೆ. ಹಿಂದೊಮ್ಮೆ, ಸಂಶೋಧನೆಗೆ ಭಾರತದಲ್ಲಿ ಅವಕಾಶ ಕಡಿಮೆ ಎಂದು ಭಾವಿಸಿ ಹತ್ತು ವರ್ಷಗಳ ಕಾಲ ಹಣಕಾಸು ಆಡಳಿತ ಸೇವೆಯಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನ್ ಮುಂದೆ ಸ್ವಂತದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಅವರನ್ನು ಕೊಂಡೊಯ್ದಿತು. ರಾಮನ್ನರಿಗೆ ತನ್ನ ಸಂಶೋಧನೆಯ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಎಷ್ಟು ವಿಶ್ವಾಸವಿತ್ತೆಂದರೆ ನೊಬೆಲ್ ಪ್ರಶಸ್ತಿ ಪ್ರಕಟವಾಗುವ ನಾಲ್ಕು ತಿಂಗಳ ಮುಂಚೆಯೇ ಸ್ವೀಡನ್ನಿಗೆ ತೆರಳಲು ಟಿಕೆಟ್ ಖರೀದಿಸಿದ್ದರು ಅವರು! ಕಲ್ಕತ್ತಾ ವಿಶ್ವವಿದ್ಯಾಲಯದ ಪಾಲಿತ್ ಪೀಠವನ್ನು ಅಲಂಕರಿಸಿದಾಗ ಅವರನ್ನು ಹೊರದೇಶಗಳಲ್ಲೂ ಸಂಶೋದನೆ ಮುಂದುವರಿಸಲು ಕೇಳಲಾಯಿತು. ರಾಮನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಬೇರೇ ದೇಶದಿಂದ ತನ್ನನ್ನು ಹುಡುಕಿ ಬರಬೇಕೆಂದರು. ವೈಜ್ಞಾನಿಕ ಸಂಶೋಧನೆಯ ಕುರಿತು ಸರ್ಕಾರದ ನಿಲುಮೆ ಮತ್ತು ನಿಷ್ಠೆಯ ಬಗ್ಗೆ ರಾಮನ್ನರಿಗೆ ನಂಬಿಕೆ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಹೊಸತರಲ್ಲೇ ಅವರು ರಾಮನ್ ರಿಸರ್ಚ್ ಸೆಂಟರ್ ಆರಂಭಿಸಿದರು. ಶುದ್ಧ ವಿಜ್ಞಾನದ ಬೆಳವಣಿಗೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದೆಂದು ಅವರು ಸರ್ಕಾರದ ಅನುದಾನಗಳನ್ನು ನಿರಾಕರಿಸಿದರು. ಸೌಲಭ್ಯಗಳ ಕೊರತೆ ಸಂಶೋಧನೆಗೆ ತೊಡಕಾಗದು ಎಂಬುದನ್ನು ರಾಮನ್ ಸಾಧಿಸಿ ತೋರಿಸಿದರು. ಇನ್ನೂರು ರೂಪಾಯಿಗೂ ಕಡಿಮೆ ವೆಚ್ಚದಲ್ಲಿ ತಾನೇ ತಯಾರಿಸಿದ ಉಪಕರಣದ ಸಹಾಯದಿಂದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು. ಅವರ ಪ್ರಕಾರ ಸ್ವತಂತ್ರ ಚಿಂತನೆ ಮತ್ತು ಕಠಿಣ ಪರಿಶ್ರಮ ಇದ್ದರೆ ಎಲ್ಲವೂ ಸಾಧ್ಯ.    ಭಾರತದಲ್ಲೇ ಹುಟ್ಟಿದ ರೋನೊಲ್ಡ್ ರಾಸ್, ಭಾರತ ಮೂಲದ ಹರಗೋಬಿಂದ ಖೋರಾನಾ, ಎಸ್. ಚಂದ್ರಶೇಖರ, ವೆಂಕಟರಾಮನ್ ರಾಮಕೃಷ್ಣನ್ ನೊಬೆಲ್ ಪ್ರಶಸ್ತಿ ಪಡೆದುಕೊಂಡರಾದರೂ ಭಾರತದ ಪ್ರಜೆಯೊಬ್ಬರಿಗೆ ವಿಜ್ಞಾನ ಸಂಶೋಧನೆಗಾಗಿ ಏಕಮಾತ್ರ ನೊಬೆಲ್ ಪ್ರಶಸ್ತಿಯು ದೊರೆತದ್ದು ರಾಮನ್‍ರ ಮೂಲಕವೇ! ಲಾರ್ಡ್ ರೇಲೆಯಂತಹ ಮಹಾನ್ ವಿಜ್ಞಾನಿಯನ್ನು ಪ್ರಶ್ನೆ ಮತ್ತು ಅನುಮಾನದ ಮೂಲಕ ಸ್ವೀಕರಿಸಿದ್ದರಿಂದಲೇ ರಾಮನ್ ಹುಟ್ಟಿದರುವಿಜ್ಞಾನ ಎಂದರೆ ಮತ್ತೇನು?  ಕೌತುಕಪ್ರಶ್ನೆಅನುಮಾನ ಅಷ್ಟೇ ಪ್ರಶ್ನೆ,ಅನುಮಾನಗಳ ಪರಿಣಾಮವಾಗಿ ಕೆಲವು ಉತ್ತರಗಳು ಸಿಕ್ಕರೂ ಸಿಗಬಹುದುಹಾಗೆ ಸಿಕ್ಕ ಉತ್ತರಗಳಿಗೂ ಪ್ರಶ್ನೆಗಳ ಕಾಟ ತಪ್ಪಿದ್ದಲ್ಲ.    ಪ್ರತಿದಿನವೂ ವಿಜ್ಞಾನದಿನವಾಗುವ ಬೀಜವೊಂದು ಈ ದಿನವೇ ಮೊಳಕೆಯೊಡೆಯಬೇಕು. ಪ್ರಶ್ನಿಸುವ, ಕುತೂಹಲದಿಂದ ಕಣ್ಣರಳಿಸುವ ಅವಕಾಶವನ್ನು ಒದಗಿಸುವ ದಿನವಾಗಿ ಅನುದಿನವೂ ವಿಜ್ಞಾನ ದಿನವು ಆಚರಿಸಲ್ಪಡಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಸ್ಮರಣೆ ಆಧರಿತ ಕಲಿಕೆಯ ವಿಧಾನಗಳನ್ನೇ ನೆಚ್ಚಿಕೊಂಡಿದೆ. ಮಗುವಿನ ಕುತೂಹಲ, ಕುತೂಹಲದ ಉತ್ಪನ್ನವಾದ ಪ್ರಶ್ನಿಸುವ ಸ್ವಭಾವ, ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಹುಡುಕಿಕೊಳ್ಳಬಲ್ಲ ಪರಿಸರ, ಪ್ರಶ್ನೆಗಳ ಮೂಲಕ ಉಂಟಾಗಬಹುದಾದ ಸಂವಾದ-ಚರ್ಚೆಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತಿಲ್ಲ.  ಪ್ರಜಾಸತ್ತಾತ್ಮಕವಲ್ಲದ ತರಗತಿಕೋಣೆಯಲ್ಲಿ ವೈಜ್ಞಾನಿಕ ಮನೋಧರ್ಮವಾಗಲಿ ಅದರ ಪ್ರಕಟರೂಪವಾದ ತಾರ್ಕಿಕ ಚಿಂತನೆ, ಸಹನೆ, ಭಿನ್ನಾಭಿಪ್ರಾಯಗಳನ್ನು ಆಲಿಸುವ ಮತ್ತು ಗೌರವಿಸುವ ಸ್ವಭಾವ, ಪೂರ್ವಾಗ್ರಹಗಳಿಂದ ಮುಕ್ತವಾದ ಚಿಂತನಾಕ್ರಮ, ತಂಡವಾಗಿ ಕಾರ್ಯನಿರ್ವಹಿಸುವ ಆಸಕ್ತಿಯನ್ನು ಬೆಳಸಲು ಸಾಧ್ಯವಿಲ್ಲ.  

ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಸಂಭ್ರಮಾಚರಣೆಯಾಗಷ್ಟೇ ಸರಿದುಹೋಗಬಾರದು ಎಂಬ ಕಾಳಜಿಯಿಂದ ನಮ್ಮ ಶಾಲೆಯಲ್ಲಿ ವಿಜ್ಞಾನದಿನವನ್ನು ಮಕ್ಕಳೇ ರೂಪಿಸಿದ ವಿಜ್ಞಾನ ಪ್ರಯೋಗಗಳು/ಮಾದರಿಗಳ ಪ್ರದರ್ಶನವನ್ನು ಏರ್ಪಡಿಸುವ  ಮೂಲಕ ಆಚರಿಸಲಾಯಿತು
   ಬೆರಗೆಂಬೋ ಬೆರಗನ್ನು ಮುಖತುಂಬಾ ಮೆತ್ತಿಕೊಂಡ ಮಕ್ಕಳು ತಮ್ಮ ಪ್ರಯೋಗ ಕೈಕೊಟ್ಟದ್ದಕ್ಕೆ ಕಾರಣ ಹುಡುಕತ್ತಲೋಮಾಡಿದ ಪ್ರಯೋಗಕ್ಕೆ ನೀಡಬೇಕಾದ ವಿವರಣೆ ತಿಳಿಯದೆ ಬಾಯ್ತೊದಲುತ್ತಲೋಒಡೆದ ಬಲೂನಿಗೆ ಚೆಲ್ಲಿದ ನೀರಿಗೆ ತಲೆಕೆಡಿಸಿಕೊಳ್ಳುತ್ತಲೋ ಇಡೀ ಶಾಲೆಯನ್ನು ಗದ್ದಲದ ಸಂತೆಯಾಗಿಸಿ ವಿಜ್ಞಾನ ದಿನವನ್ನು ಹಬ್ಬವಾಗಿಸಿದರು.

Monday, February 18, 2019

ಪರೀಕ್ಷೆಯು ಸಂಭ್ರಮವಾಗಲಿ!


ಬೆಸ್ಟ್ ಆಫ್ ಲಕ್ ಎಸ್. ಎಸ್. ಎಲ್. ಸಿ ಮಕ್ಕಳೇ! ಪರೀಕ್ಷೆಯು ಸಂಭ್ರಮವಾಗಲಿ!
ಹರಿಪ್ರಸಾದ್ ಸರ್ ಬರೀತಾರೆ..
ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ
§ ಸಂತೋಷವಾಗಿದ್ದಾಗ ನಾವು ಹೆಚ್ಚು ಕೆಲಸಮಾಡಬಲ್ಲೆವು§  ಮನಸ್ಸು ಶಾಂತಿಯಿಂದಿರಲಿ!§  ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ

§  ಎಲ್ಲ ಪ್ರಶ್ನೆಗಳನ್ನೂ ಓದಿಕೊಳ್ಳಿ§  ಕನಿಷ್ಠ 20 ಪ್ರಶ್ನೆಗಳಿಗೆ ಉತ್ತರ ಗೊತ್ತಿದೆಯೆಂದರೆ ಸಂತೋಷಪಡಿ§  ಉಳಿದ ಪ್ರಶ್ನೆಗಳಿಗೆ ಉತ್ತರ ಹೊಳೆಯುತ್ತಾ ಹೋಗುತ್ತದೆ.

Tuesday, February 12, 2019

ಹೀಗಿರಲಿ ಪರೀಕ್ಷಾಪೂರ್ವ ಸಿದ್ಧತೆ

ವಿದ್ಯಾರ್ಥಿಗಳೇ, ವಾರ್ಷಿಕ ಪರೀಕ್ಷೆ ಇನ್ನೇನು ಹತ್ತಿರ ಬಂದೇ ಬಿಟ್ಟಿತು ಎಂಬ ಆತಂಕ ಬಿಟ್ಟುಬಿಡಿ. ಎಸ್‌ಎಸ್‌ಎಲ್‌ಸಿ/ಪಿಯುಸಿ ಓದುತ್ತಿರುವವರು ಮುಂದೇನಾಗಬೇಕು ಎಂಬುದರ ಬಗ್ಗೆ ಕನಸು ಕಟ್ಟಿಕೊಂಡಿರುತ್ತೀರಿ. ಆ ಗುರಿಯನ್ನು ತಲುಪಿ ಯಶಸ್ಸನ್ನು ಕಾಣಬೇಕು ಎಂದು ಹಗಲು– ರಾತ್ರಿ ಕಷ್ಟಪಡುವವರು ನಿಮ್ಮಲ್ಲಿ ಹಲವರು ಇರಬಹುದು. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಓದಿನ ಬಗ್ಗೆ ಏಕಾಗ್ರತೆಯನ್ನು ತಂದು ಕೊಡಲು ಹಲವು ಸುಲಭೋಪಾಯಗಳಿವೆ.

l ಯಾರ ಒತ್ತಡಕ್ಕೂ ಮನಸ್ಸನ್ನು ಕೊಡದೆ, ನಿಮ್ಮ ವಿಶ್ವಾಸದ ಕಡೆ ಗಮನ ಕೊಟ್ಟು ಓದಲು ಪ್ರಾರಂಭಿಸಿ. ಓದಿದ ವಿಚಾರ ಮರೆತು ಹೋಗುತ್ತದೆ, ನನ್ನಿಂದ ಸಾಧ್ಯವಿಲ್ಲ ಎಂಬ ಭ್ರಮೆಯಿಂದ ದೂರವಿರಿ. ನೀವು ಇಷ್ಟು ದಿನಗಳೂ ಓದಿದ್ದು, ತರಗತಿಯಲ್ಲಿ ಕೇಳಿಸಿಕೊಂಡಿದ್ದು ಎಲ್ಲವೂ ನಿಮ್ಮ ಮಸ್ತಕದಲ್ಲಿ ಒಂದೆಡೆ ಶೇಖರವಾಗಿದೆ. ಸಮಾಧಾನದ ಮನಸ್ಸಿನಿಂದ ಅವೆಲ್ಲವನ್ನೂ ಸೋಮಾರಿತನ ಮಾಡದೆ, ಅತೀವ ನಂಬಿಕೆಯನ್ನು ಬೆಳೆಸಿಕೊಳ್ಳದೆ ಪುನರ್ ಮನನ ಮಾಡಿ. ತನ್ನಷ್ಟಕ್ಕೇ ಎಲ್ಲವೂ ನೆನಪಿಗೆ ಬರುತ್ತದೆ. ಮುಖ್ಯವಾಗಿ ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು.
l ಈ ಸಮಯದಲ್ಲಿ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ನಿನ್ನೆಯ ಶಕ್ತಿಯನ್ನು ಇವತ್ತಿಗೆ ಹೋಲಿಕೆ ಮಾಡಿಕೊಳ್ಳಿ. ಆತ್ಮಸ್ಥೈರ್ಯ ತಾನಾಗೇ ಬೆಳೆಯುತ್ತದೆ.
l ಒಂದು ದಿನಕ್ಕೆ ಒಂದು ಪಠ್ಯವನ್ನು  ಓದಿ. ಓದುವಾಗ ಪೆನ್ಸಿಲ್‌ನಿಂದ ಮುಖ್ಯವಾದ ಅಂಶ, ಸೂತ್ರ, ಘಟನೆಗಳ ಇಸವಿಗಳನ್ನು ಗುರುತು ಮಾಡಿಕೊಳ್ಳಿ. ಇದನ್ನು ಬೆಳಗಿನ ಜಾವವೇ ಮಾಡಿ.
l ಸಾಯಂಕಾಲ ಬೆಳಿಗ್ಗೆ ಓದಿದ ಪಠ್ಯದ ಪ್ರಶ್ನೆಗಳಿಗೆ ಉತ್ತರಿಸಿ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದರಿಂದ, ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ಸಮಗ್ರ ಚಿತ್ರಣ ಸಿಗುತ್ತದೆ ಹಾಗೂ 3 ಗಂಟೆಯ ಅವಧಿಯಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತೀರಿ. ಯಾವ ಪ್ರಶ್ನೆಗೆ ಎಷ್ಟು ಸಮರ್ಪಕ ಉತ್ತರ ಬರೆಯಬೇಕು ಎಂಬ ಮಾಹಿತಿಗಳೂ ಸಿಗುತ್ತವೆ.
l ಯಾವ ಪಠ್ಯದಲ್ಲಿ ಯಾವ ಅಧ್ಯಾಯವು ಸ್ವಲ್ಪ ಕಷ್ಟವೆನಿಸುತ್ತದೆಯೋ ಅದರ ಬಗ್ಗೆ ಹೆಚ್ಚಿನ ಗಮನವಿಟ್ಟು ಪುನರಾವರ್ತಿ ಓದಿ. ತಿಳಿಯದಿದ್ದಲ್ಲಿ ಶಿಕ್ಷಕರ ಮೂಲಕ ತಿಳಿದುಕೊಳ್ಳಿ. ಕಷ್ಟ ಎಂದು ಬಿಡಬೇಡಿ. ಅದರಲ್ಲಿ ಬರುವ ಒಂದು ಅಂಕದ ಪ್ರಶ್ನೆಯ ಉತ್ತರವೂ ಬಹಳ ಮುಖ್ಯ.
l ಪರೀಕ್ಷೆಯ ಹಿಂದಿನ ದಿನ ಹೊಸದಾಗಿ ಏನನ್ನೂ ಓದಲು ಪ್ರಯತ್ನಿಸದಿರಿ.
ಸುಲಭ ಪ್ರಶ್ನೆಗೆ ಮೊದಲು ಉತ್ತರ
ಪರೀಕ್ಷಾ ಕೊಠಡಿಗೆ ಮೊದಲನೇ ದಿನ ಅರ್ಧಗಂಟೆ ಮುಂಚಿತವಾಗಿ ಹೋಗಿ ನಿಮ್ಮ ಸ್ಥಾನವನ್ನು ಅಲಂಕರಿಸಿ ಸಮಾಧಾನ ಚಿತ್ತದಿಂದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಉತ್ಸುಕರಾಗಿರಿ. ಮೊದಲು ಗೊತ್ತಿರುವ, ಸುಲಭವಾದ ಪ್ರಶ್ನೆಗಳನ್ನು ಉತ್ತರಿಸಿ. ನಂತರ ಕಷ್ಟ ಎನಿಸಿದ ಪ್ರಶ್ನೆಗೆ ಒತ್ತಡ ಕಡಿಮೆಯಾಗಿ ಮನಸ್ಸು ತನ್ನಷ್ಟಕ್ಕೆ ನಿಮಗೆ ಅರಿವಿಲ್ಲದಂತೆ ದಾರಿ ಮಾಡಿಕೊಡುತ್ತದೆ.
ಚಂದದ ಬರವಣಿಗೆಯೂ ಒಂದು ಕಲೆ. ಇದು ಅಭ್ಯಾಸದಿಂದ ಬರುವ ಒಂದು ಕಲಾಶಕ್ತಿ. ಪರೀಕ್ಷೆಯಲ್ಲಿ ಹಾಳೆಗಳನ್ನು ತುಂಬಿಸಬೇಕೆಂದು ದಪ್ಪದಪ್ಪವಾಗಿ ಅಕ್ಷರಗಳನ್ನು ಬರೆಯುವುದು ಬೇಡ. ಸಹಜ ರೀತಿಯಲ್ಲಿ ಇರಲಿ ನಿಮ್ಮ ಬರವಣಿಗೆ. ಅತಿ ಶೀಘ್ರವೂ ಬೇಡ ಅತಿ ನಿಧಾನಗತಿಯೂ ಬೇಡ. ನಿಮ್ಮ ಬರವಣಿಗೆ ಮತ್ತೊಬ್ಬರಿಗೆ ಓದಲು ಸಾಧ್ಯವಾಗುವಂತಿರಬೇಕು. ಕಾಗುಣಿತ, ಅಕ್ಷರಗಳು ತಪ್ಪಿಲ್ಲದೇ ಬರೆದರೆ ಅರ್ಧ ಪರೀಕ್ಷೆ ಗೆದ್ದಂತೆ.
ವಿಜ್ಞಾನ, ಗಣಿತದ ಪರೀಕ್ಷೆಗಳಲ್ಲಿ ಸೂತ್ರಗಳನ್ನು ಬರೆಯುವುದು, ಹಂತ ಹಂತವಾಗಿ ಲೆಕ್ಕಗಳನ್ನು ಬಿಡಿಸುವುದನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ನೀವು ಬರೆದು ಮುಗಿಸಿದ ಉತ್ತರಗಳನ್ನು ಮತ್ತೊಮ್ಮೆ ಪರಿಶೀಲಿಸಿ. ಆದರೆ ಅದರ ಮರಣೋತ್ತರ ಪರೀಕ್ಷೆ ಮಾಡಬೇಡಿ. ಸಮರ್ಪಕವಾದ ಉತ್ತರಕ್ಕೆ ಸರಿಯಾದ ಅಂಕ ಸಿಕ್ಕೇ ಸಿಗುತ್ತದೆ. ಈಗಲೇ ಆ ಆತಂಕಬೇಡ.
ಪ್ರಶ್ನೆಗಳನ್ನು ಸರಿಯಾಗಿ ಒಂದಲ್ಲ ಎರಡು ಬಾರಿ ಓದಿ, ಅಲ್ಲಿರುವ ಮಾರ್ಗದರ್ಶನದ ಸೂಚನೆಗಳಂತೇ ಅಂಕಕ್ಕೆ ತಕ್ಕಂತೆ ಉತ್ತರಿಸಿ. ಇದು ನಿಮಗೆ ಸಮಯದ ಹತೋಟಿ ತಂದು ಕೊಡುತ್ತದೆ. ಒಂದು ಪ್ರಶ್ನೆಗೆ ಉತ್ತರಿಸಿದ ನಂತರ ಮತ್ತೊಂದು ಪ್ರಶ್ನೆಯ ಉತ್ತರಕ್ಕೆ ಒಂದು ಗೆರೆಯನ್ನು ಎಳೆಯಿರಿ.
ಆ ಮೂರೂ ಗಂಟೆಗಳ ಕಾಲವೂ ಪ್ರಶ್ನೆಪತ್ರಿಕೆಯೊಂದಿಗೆ ನಿಮ್ಮ ಒಡನಾಟ ಸಮಚಿತ್ತದಿಂದ ಇರಲಿ. ಆಗಲೇ ತಿಳಿಸಿದಂತೆ ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿ ಕಷ್ಟದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮನಸ್ಸು ಸಹಕರಿಸುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಬೇರೊಬ್ಬ ವಿದ್ಯಾರ್ಥಿ ಹೆಚ್ಚುವರಿ ಶೀಟ್‌ ಕೇಳಿದಾಕ್ಷಣ ನೀವು ಅದರ ಬಗ್ಗೆ ಆತಂಕದಿಂದ ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವುದು ಬೇಡ. ನಿಮ್ಮ ಸಾಧನೆ ನಿಮ್ಮ ಪ್ರಯತ್ನ ನಿಮ್ಮದೇ ಹೊರತು ಬೇರೆಯವರದಾಗಿರುವುದಿಲ್ಲ.
ಒಂದು ವೇಳೆ ಆತಂಕದಿಂದ ಅಥವಾ ಭಯದಿಂದ ಗಂಟಲು ಒಣಗಿದಂತಾದರೆ ತಕ್ಷಣವೇ ನೀರು ಕುಡಿಯಿರಿ. ಆಮ್ಲಜನಕದ ಸಹಾಯದಿಂದ ಮನಸ್ಸು ಪುನಃ ಚುರುಕುಗೊಂಡು ಉತ್ತರಿಸಲು ಸಹಕರಿಸುತ್ತದೆ. ಮೂರು ಗಂಟೆಗಳ ಸಂಪೂರ್ಣ ಅವಧಿಯನ್ನು ಉಪಯೋಗಿಸಿಕೊಳ್ಳಿ. ಒಂದು ವೇಳೆ ಬೇಗನೇ ಉತ್ತರಿಸಿದ್ದಾದರೆ ಬರೆದ ಉತ್ತರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.
ಪರೀಕ್ಷಾ ದಿನಗಳಂದು ಯಾವ ಸ್ನೇಹಿತರೊಡನೆಯೂ ಅಂದಿನ ಪರೀಕ್ಷೆಯ ಬಗ್ಗೆ ಚರ್ಚಿಸದೇ ಇರುವುದು ಒಳ್ಳೆಯದು. ನಿಮ್ಮ ಓದು ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆಯೇ ಹೊರತು ಮತ್ತೊಬ್ಬರದಲ್ಲ. ಪ್ರತಿ ನಿತ್ಯ ಒಂದು ಪರೀಕ್ಷೆ ಮುಗಿದು ಮನೆಗೆ ಹೋದ ಮೇಲೆ ಸ್ವಲ್ಪ ವಿಶ್ರಾಂತಿ, ವಾಯುವಿಹಾರ ಮಾಡಿ ನಂತರದ ಪರೀಕ್ಷೆಯ ಪಠ್ಯವನ್ನು ಓದಲು ಪ್ರಾರಂಭಿಸಿ. ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಸಂಗೀತವನ್ನು ಪಠಿಸುವುದು ಅಥವಾ ಕೇಳುವುದರಿಂದ ಮನಸ್ಸು ಉಲ್ಲಾಸಭರಿತವಾಗುತ್ತದೆ.
ಪೋಷಕರಿಗೆ ಕಿವಿ ಮಾತು
ನಿಮ್ಮ ಮಕ್ಕಳಲ್ಲಿ ಆತಂಕದ ಬದಲು ಆತ್ಮವಿಶ್ವಾಸವನ್ನು ತುಂಬಿ. ಶಿಕ್ಷಕರು ಮತ್ತು ಪೋಷಕರಲ್ಲದೆ ಬೇರೆ ಯಾರೂ ಈ ಶಕ್ತಿಯನ್ನು ತುಂಬಲಾರರು. ಪರೀಕ್ಷೆ ಸಮಯದಲ್ಲಿ ನೀವಾಡುವ ಮಾತು, ನೀಡುವ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಭಾವನೆಗಳು ಗಟ್ಟಿಯಾಗುತ್ತವೆ. ಇದರಿಂದಲೇ ಅವರು ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುವುದು. ಈಗಿನ ಮಕ್ಕಳಿಗೆ ಪದೇ ಪದೇ ಓದು ಎಂದು ಹೇಳಿಸಿಕೊಳ್ಳುವುದು ತುಂಬಾ ಮುಜುಗರ ಕೊಡುತ್ತದೆ. ನಿಮ್ಮ ಬಾಲ್ಯ ಜೀವನದ ಘಟನೆಗಳನ್ನು ಇಂದಿನ ನಿಮ್ಮ ಮಕ್ಕಳೊಡನೆ ಹೋಲಿಸಬೇಡಿ. ಕಾಲ ಬದಲಾಗಿದೆ. ನೀವೂ ಪರಿವರ್ತನೆ ಹೊಂದಲೇಬೇಕು. ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಹೋಗುತ್ತಿದ್ದಾನೆಂದರೆ ಅವರೊಂದಿಗೆ ಒತ್ತಡದ ಮಾತುಗಳಿಗಿಂತ ಪ್ರೋತ್ಸಾಹದ ಮಾತನ್ನಾಡಿ. ಅದು ಅವರ ಆಂತರಿಕ ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಚುರುಕುಗೊಳಿಸುತ್ತದೆ.
ಪರೀಕ್ಷೆಯ ದಿನಗಳಂದು ಅವರೊಡನೆ ನಗುತ್ತಾ ಮಾತನಾಡಿಸಿ. ಅವರ ಹಾಲ್ ಟಿಕೆಟ್, ಪೆನ್, ಪೆನ್ಸಿಲ್, ವಾಟರ್ ಬಾಟಲ್ ಇವುಗಳನ್ನು ಜೋಡಿಸಿಕೊಳ್ಳುವುದರಲ್ಲಿ ಸಹಕರಿಸಿ. ಚೆನ್ನಾಗಿ ಪರೀಕ್ಷೆಯಲ್ಲಿ ಮಾಡು ಎಂದಷ್ಟೇ ಹೇಳಿ ಹರಸಿ. ಹೆಚ್ಚಿನ ಮಾತುಗಳು ಅವರಿಗೆ ಆತಂಕವನ್ನುಂಟು ಮಾಡಬಹುದು.
ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ. ಸಮಾಧಾನದಿಂದ ಅವರ ಮಾತುಗಳನ್ನು ಆಲಿಸಿ ಸೂಕ್ತವಾದ ಸಲಹೆಗಳನ್ನು ಸರಳ ಹಾಗೂ ಪ್ರೀತಿಯ ಮಾತಿನಿಂದ ತಿಳಿ ಹೇಳಿ. ಒಂದು ನೆನಪಿರಲಿ ನಮಗಿಂತಲೂ ನಮ್ಮ ಮಕ್ಕಳು ಬುದ್ಧಿವಂತರು ಎಂಬುದನ್ನು ನಾವು ಒಪ್ಪಲೇಬೇಕು. ನಾವು ಪೋಷಕರು, ನಾವು ಹೇಳಿದಂತೇ ನಡೆಯಬೇಕೆಂಬ ಧೋರಣೆಯನ್ನು ಬಿಟ್ಟಲ್ಲಿ ಮಕ್ಕಳು ನಮ್ಮೊಡನೆ ಸ್ನೇಹತ್ವದಿಂದ ಸುಲಭವಾಗಿ ಆಪ್ತ ಸಮಾಲೋಚನೆಯನ್ನು ಮಾಡುತ್ತಾರೆ. 
ಟಿವಿ, ಮೊಬೈಲ್‌ನಿಂದ ದೂರವಿರಿ

ದಯವಿಟ್ಟು ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್‌ಗಳ ಸಹವಾಸದಿಂದ ದೂರವಿರಿ. ಕಾರಣ ಮನಸ್ಸು ಬಹಳ ಬೇಗ ಚಂಚಲಗೊಂಡು ಓದಿನ ಕಡೆಗೆ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಇದರ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಪ್ರತಿ ನಿತ್ಯ ಓದಲು ಕುಳಿತುಕೊಳ್ಳುವ ಮೊದಲು ಮತ್ತು ನಂತರ ಧ್ಯಾನ ಮಾಡಿ ಏಕಾಗ್ರತೆಯನ್ನು ಗಳಿಸಿ. ಹಿತಮಿತವಾದ, ಅಮ್ಮ ಮಾಡಿದ ಆಹಾರವನ್ನೇ ಸೇವಿಸಿ. ಆರೋಗ್ಯವೇ ಭಾಗ್ಯ ಎಂಬುದು ಸದಾ ನೆನಪಿನಲ್ಲಿರಲಿ. ಕನಿಷ್ಠ 5–6 ಗಂಟೆ ನಿದ್ರೆ ಮಾಡಿ. ನೆನಪಿನ ಶಕ್ತಿ ಉಳಿದು, ಬೆಳೆಯುತ್ತದೆ. ಕುಟುಂಬದವರೊಡನೆ ಸ್ವಲ್ಪ ಸಮಯವಾದರೂ ನಗುವಿನೊಂದಿಗೆ ಮಾತಾಡಿ. ಅಮ್ಮನ ಸನಿಹ ನಿಮಗೆ ಅರಿವಿಲ್ಲದ ಶಕ್ತಿ ಕೊಡುತ್ತದೆ.
ರಾತ್ರಿ ಮಲಗುವ ಮುನ್ನ ಚೆನ್ನಾಗಿ ನೀರು ಕುಡಿಯುವುದರಿಂದ, ನಾವು ತೆಗೆದುಕೊಂಡ ಆಹಾರ ಚೆನ್ನಾಗಿ ಪಚನವಾಗುತ್ತದೆ, ಉಷ್ಣಾಂಶವನ್ನು ಹೊರಗೆ ಹಾಕುತ್ತದೆ ಅಲ್ಲದೆ ಬೆಳಿಗ್ಗೆ ಎದ್ದೇಳಲು ಸಹಾಯ ಮಾಡುತ್ತದೆ. ಇದೊಂದು ಒಳ್ಳೆಯ ಅಭ್ಯಾಸ.
ಒತ್ತಡ, ಆತಂಕ, ಭಯದ ಸ್ವಭಾವದಿಂದ ಮರೆವು ಹೆಚ್ಚಾಗುತ್ತದೆ. ಅದರ ಬದಲಿಗೆ ಸದಾ ಹಸನ್ಮುಖಿಯಾಗಿ ನಾನು ಖಂಡಿತ ಪರೀಕ್ಷೆಗೆ ಸಿದ್ಧನಾಗಿದ್ದೇನೆ, ಚೆನ್ನಾಗಿ ಬರೆಯಬಲ್ಲೆ ಎಂಬ ಉಲ್ಲಾಸದಿಂದ ಪರೀಕ್ಷೆಯನ್ನು ಎದುರಿಸಿ. 

Monday, February 11, 2019

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪೆರ್ವಾಜೆಯ ಪ್ರತಿಭೆಗಳು


   ದಿನಾಂಕ:-23-01-2019ರಂದು ವಂಡೇಲಾ ಹಾಲ್ ಗಂಜಿಮಟದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿದ್ದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ವಿದ್ಯಾರ್ಥಿಗಳಾದ ಮಾ| ಸಮೃತ್ 1 ಚಿನ್ನ, 1 ಬೆಳ್ಳಿ, ಮಾ| ಆಕಾಶ್ 1 ಚಿನ್ನ, 1 ಬೆಳ್ಳಿ, ಮಾ| ಅರುಣ್ 1 ಚಿನ್ನ, ಮಾ| ಚಿರಾಗ್ 1 ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ಕರಾಟೆ ಶಿಕ್ಷಕರಾದ ಶ್ರೀ ರಂಜಿತ್ ಎಸ್. ಕುಂದರ್ ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ


 ಸರಕಾರದಿಂದ ಕೊಡಮಾಡುವ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮವು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆಯಿತು. ಅತಿಥಿಗಳಾಗಿ ಶ್ರೀಮತಿ ಮಾಲಿನಿ ಜೆ. ಶೆಟ್ಟಿ-ಅಧ್ಯಕ್ಷರು ತಾಲೂಕು ಪಂಚಾಯತ್ ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀ ಪ್ರದೀಪ್ ರಾಣೆ-ಸ್ಥಳೀಯ ಪುರಸಭಾ ಸದಸ್ಯರು, ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಶ್ರೀ ಕಾಳಿದಾಸ-ಹಿರಿಯ ಸಹಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀಮತಿ ಮಾಲಿನಿ ಜೆ. ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಬೈಸಿಕಲನ್ನು ಹಸ್ತಾಂತರಿಸಿದರು. ಶ್ರೀಮತಿ ವೀಣಾ ಎ. ಕಾರ್ಯಕ್ರಮವನ್ನು ನಿರೂಪಿಸಿದರು.
04-02-2019 ಸೋಮವಾರ

ತಂತ್ರಜ್ಞಾನವನ್ನು ಬಳಸಿ ಮುನ್ನಡೆಯುವುದು ಅಗತ್ಯ ಮಾತ್ರವಲ್ಲ, ಅನಿವಾರ್ಯ: ರಾಜೆನ್ ಪಡುಕೋಣೆ




 ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಆಶ್ರಯದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ    ದಿನಾಂಕ: 06-02-2019 ರಂದು ಬುಧವಾರ ಕನ್ನಡ ಸ್ಮಾರ್ಟ್ ಕ್ಲಾಸ್ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ವಿದ್ಯಾರ್ಥಿನಿಯರಾದ ಕು| ಅನಘ, ಕು| ಸಹನಾ, ಕು| ಶ್ರೀನಿಧಿ, ಕು| ಸುಷ್ಮಾ, ಕು| ಸೌಮ್ಯ ಇವರಿಂದ ಪ್ರಾರ್ಥನೆಯ ಮೂಲಕ ಆರಂಭಗೊಂಡಿತು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು ಪ್ರೌಢಶಾಲಾ ವಿಭಾಗ ಇವರು ಸರ್ವರನ್ನೂ ಸ್ವಾಗತಿಸಿ ಪ್ರಸ್ತುತ ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋ ಆರಂಭಗೊಂಡಿದ್ದು ಅದರ ಪ್ರಯೋಜನವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 14 ಸಂಸ್ಥೆಗಳು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಾರಂಭದಲ್ಲಿ 4 ಶಾಲೆಗಳಲ್ಲಿ ಆರಂಭಗೊಂಡ ವಚ್ರ್ಯುವಲ್ ಕ್ಲಾಸ್ ಇದೀಗ 80ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಉತ್ತಮ ಸಂಪನ್ಮೂಲ ಶಿಕ್ಷಕರಿಂದ ಪಾಠಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆಯುತ್ತಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸುವಲ್ಲಿ ತುಂಬಾ ಸಹಕಾರಿಯಾಗಿರುವುದು ಗಣನೀಯವಾಗಿ ಕಂಡು ಬರುತ್ತಿದೆ. 

ಸುಮಾರು 10ಕ್ಕಿಂತಲೂ ಹೆಚ್ಚು ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋಗಳನ್ನು ಹೊಂದಿದ್ದು ಮಕ್ಕಳಿಗೆ ತರಗತಿಯ ಅವಧಿಗೆ ಅಡ್ಡಿಯಾಗದಂತೆ ಪೂರಕವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದ ವಚ್ರ್ಯುವಲ್ ಕ್ಲಾಸ್‍ನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಜೆನ್ ಪಡುಕೋಣೆ-ಸಿಇಒ ಮಣಿಪಾಲ ಫೌಂಡೇಶನ್ ಬೆಂಗಳೂರು ಇವರು ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಮತ್ತು ಅದರ ಅಳವಡಿಕೆಯ ಮೂಲಕ ನಡೆಯುವ ವಚ್ರ್ಯುವಲ್ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಪೂರಕವಾಗಿದ್ದು ಮಹಾಮ್ಮಾಯ ಫೌಂಡೇಶನ್ ಈ ನಿಟ್ಟಿನಲ್ಲಿ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿದೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುವಲ್ಲಿ ಪೂರಕವಾಗಿದ್ದು ಕ್ಷಣದಲ್ಲಿಯೇ ಸಿದ್ಧವಾಗಿ ಅನಿಸಿಕೆಯನ್ನು ಹಂಚಿಕೊಂಡ ವಿದ್ಯಾರ್ಥಿನಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಅನಿಸಿಕೆಯನ್ನು ಮೆಚ್ಚಿಕೊಂಡು ಈ ವಚ್ರ್ಯುವಲ್ ಕ್ಲಾಸ್ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿ ಉತ್ತಮ ಭವಿಷ್ಯವನ್ನು ಹಾರೈಸಿದರು. ಸಭೆಯ ಅಧ್ಯಕ್ಷರಾಗಿದ್ದ ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ನಮ್ಮ ಸಂಸ್ಥೆಗೆ ಇಂತಹ ಒಂದು ಸುವರ್ಣ ಅವಕಾಶವನ್ನು ಒದಗಿಸಿದ ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಇದರ ಸಂಚಾಲಕರನ್ನು ಅಭಿವಂದಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ನಿವೇದಿತಾ-ವಿಜ್ಞಾನ ವಿಷಯ ಪರಿವೀಕ್ಷಕರು ಇವರು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿರುವ ಈ ಸಂಸ್ಥೆಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾ ಕಲಿಕೆಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ವಿಶೇಷ ಪರಿಣಾಮದ ಕುರಿತು ತಿಳಿಸಿದರು. ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ ವಿದ್ಯಾರ್ಥಿಗಳು ಅತ್ಯಂತ ಸಂತಸವನ್ನು ಅಭಿವ್ಯಕ್ತ ಪಡಿಸುತ್ತಾ ವಚ್ರ್ಯುವಲ್ ತರಗತಿಯಲ್ಲಿನ ಪಿಪಿಟಿ ಪ್ರೆಸೆಂಟೇಶನ್, ಆ್ಯನಿಮೇಷನ್, ವೀಡಿಯೋಗಳ ಮೂಲಕ ಪಾಠದ ಬೋಧನೆಯ ಪರಿಣಾಮವನ್ನು ತಿಳಿಸಿದರು. ಶ್ರೀ ಶಿವಾನಂದ-ಶಿಕ್ಷಣ ಸಂಯೋಜಕರು ಇವರು ತಂತ್ರಜ್ಞಾನದ ಮಹತ್ವ ಮತ್ತು ತರಗತಿಯಲ್ಲಿ ಅದರ ಅಳವಡಿಕೆಯ ಅಗತ್ಯ ಮತ್ತು ಅನಿವಾರ್ಯತೆ ಕುರಿತು ತಿಳಿಸಿದರು., ಶ್ರೀಮತಿ ಲಕ್ಷ್ಮೀ ಹೆಗಡೆ-ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ವಚ್ರ್ಯುವಲ್ ಕ್ಲಾಸ್‍ನಲ್ಲಿ ತೊಡಗಿಕೊಂಡಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳನ್ನು ಗೌರವಿಸಿದರು. ಶ್ರೀ ಉದಯ ಗಾಂವಕಾರ ಕಾರ್ಯಕ್ರಮವನ್ನು ನಿರೂಪಿಸಿದರು. ಆಧುನಿಕ ತಂತ್ರಜ್ಞಾನ ಯುಗದ ಅತ್ಯವಶ್ಯ ಅಂಗವಾಗಿ ಮೂಡಿಬಂದಿರುವ ವಚ್ರ್ಯುವಲ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವೂ ಆಕರ್ಷಣೀಯವಾಗಿ ಮೂಡಿ ಬಂದಿದೆ.


ಫೋಟೋ: ದ್ವಾರಕಾ ನಿರಂಜನ್

Friday, January 25, 2019

ಪೆರ್ವಾಜೆಶಾಲೆಗೆ ಅತ್ಯುತ್ತಮ ಮತದಾರ ಸಾಕ್ಷರತಾ ಕ್ಲಬ್ ಪ್ರಶಸ್ತಿ


ಮತದಾರ ದಿನವಾದ ಜನವರಿ 25 ರಂದು ಉಡುಪಿಯ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಶಾಲೆಯ ಮತದಾರ ಸಾಕ್ಷರತಾ ಕ್ಲಬ್‍ನ್ನು ಜಿಲ್ಲೆಅತ್ಯುತ್ತಮ ಕ್ಲಬ್ ಎಂದು ಗುರುತಿಸಿ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಕೆ. ಹರ್ಷಿಣಿರವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾಧಿಕಾರಿಯವರಾದ ಶ್ರೀಮತಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಇವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಿಂಧು ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಶ್ರೀವಿದ್ಯಾ, ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು







Thursday, January 24, 2019

ನೇತಾಜಿಯವರ ಜನ್ಮ ದಿನಾಚರಣೆ


 
 ದಿನಾಂಕ:-23-01-2019 ಬುಧವಾರದಂದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನೇತಾಜಿ ಸುಭಾಸ್‍ಚಂದ್ರ ಭೋಸ್‍ರ 122ನೇ ಜನ್ಮ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಮುನಿರಾಜ ರೆಂಜಾಳ-ಮುಖ್ಯೋಪಾಧ್ಯಾಯರು ಜೈನ ಪ್ರೌಢಶಾಲೆ ಮೂಡಬಿದ್ರೆ,  ಶ್ರೀ ಕೃಷ್ಣಕಾಂತ್-ಎ.ಎಸ್.ಪಿ. ಕಾರ್ಕಳ ನಗರ ಪೊಲೀಸ್ ಠಾಣೆ, ಶ್ರೀ ಸುರೇಶ್ ಮಡಿವಾಳ-ಸಂತೂರ್ ಡಿಸ್ಟ್ರಿಬ್ಯೂಟರ್, ಶ್ರೀ ಶೇಕ್ ಮುಸ್ತಾಫ, ಶ್ರೀ ಶಶಿಧರ ಹೆಚ್.-ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಕಳ,   ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಎಸ್.ಡಿ.ಎಂ.ಸಿ., ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಹಿರಿಯ ಶಿಕ್ಷಕರಾದ ಶ್ರೀ ಕಾಳಿದಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಮತ್ತು ವಿದ್ಯಾರ್ಥಿಗಳು ನೇತಾಜಿಯವರ ಜೀವನ, ಸ್ವಾತಂತ್ರ್ಯ ಹೋರಾಟ, ಕ್ರಾಂತಿಕಾರಿ ಬದುಕು, ಉದಾತ್ತ ವಿಚಾರಗಳ ಕುರಿತು ಮಾತನಾಡಿದರು.  ವಿದ್ಯಾರ್ಥಿಗಳು ಓದಿದ ಪುಸ್ತಕಗಳ ಅನಿಸಿಕೆಗಳ ಸಂಗ್ರಹ ‘ಸಂಕಲ್ಪ’, ಶಾಲಾ ಮಾಸಿಕ ಪತ್ರಿಕೆ ‘ಗೋಮತಿ’ ಮತ್ತು              7 ತರಗತಿಗಳ ಮಾಸಿಕ ಪತ್ರಿಕೆಗಳನ್ನು ಅನಾವರಣಗೊಳಿಸಲಾಯಿತು. ಉತ್ತಮ ಅನಿಸಿಕೆ ಬರೆದ ವಿದ್ಯಾರ್ಥಿಗಳನ್ನು ಬಹುಮಾನಿಸಲಾಯಿತು. ಸಂತೂರ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರನ್ನು, ಆರೋಗ್ಯ ಇಲಾಖೆ ನಡೆಸಿದ್ದ ಪ್ರಬಂಧ ಸ್ಪರ್ಧೆ ವಿಜೇತರನ್ನು ಬಹುಮಾನಿಸಲಾಯಿತು. ಕು| ರಕ್ಷಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕು| ಸಂಧ್ಯಾ ಸರ್ವರನ್ನೂ ವಂದಿಸಿದರು. ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






Wednesday, January 23, 2019

ಪೆರ್ವಾಜೆ ಶಾಲೆಯ ತರಕಾರಿ ತೋಟ

ಎಲ್ಲ ಸರಕಾರಿ ಶಾಲೆಗಳಲ್ಲೂ ಮದ್ಯಾಹ್ನದ  ಉಚಿತ ಬಿಸಿಯೂಟ ಲಭ್ಯವಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.
ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.
ಬೇಳೆ/ಕಾಳನ್ನು ಬಳಕೆಯನ್ನು ಕಡ್ಡಾಯಗೊಳಿಸಿದೆ. ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸಲು ಪೆರ್ವಾಜೆ ಶಾಲೆಯಲ್ಲಿ ತರಕಾರಿ ತೋಟವನ್ನು ನಿರ್ವಹಿಸಲಾಗುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವೇದಾವತಿಯವರು ಮುಖ್ಯಶಿಕ್ಷಕರ ಮಾರ್ಗದರ್ಶನ ಮತ್ತು ಶಾಲೆಯ ಶಿಕ್ಷಕ ವೃಂದದ ಬೆಂಬಲ ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮೂಲಕ ತರಕಾರಿ ತೋಟವನ್ನು ನಿರ್ವಹಿಸುತ್ತಿದ್ದಾರೆ.