Saturday, December 1, 2018

ಹೀಗೆ ಒಂದು ಸಾಂಸ್ಕೃತಿಕ ಪ್ರತಿರೋಧ



ದೊಡ್ಡವರು,ಜಾತಿ -ಧರ್ಮಗಳ ಸಂಕೋಲೆಗಳಲ್ಲಿ ಬಂಧಿತರಾಗಿ ತಮಗೇ ಅರಿವಿಲ್ಲದಂತೆ ನೂರಾರು ಗೋಡೆಗಳನ್ನು ತಮ್ಮ ಸುತ್ತ ಕಟ್ಟಿಕೊಂಡು ದ್ವೀಪಗಳಾಗುತ್ತಿರುವಾಗ ಚಿಕ್ಕ ಮಕ್ಕಳು ತಮ್ಮ ಸೃಜನಶೀತೆಯ ಮೂಲಕ ಇಂತಹ ಸಣ್ಣತನಗಳನ್ನು ಪ್ರತಿರೋಧಿಸುತ್ತಲೇ ಇರುತ್ತಾರೆ.ಇಷ್ಟನ್ನು ಹೇಳಲು ಕಾರಣವಿದೆ. 

ನಮ್ಮ ಶಾಲೆಯಲ್ಲಿ ನಡೆದ ಛದ್ಮವೇಷ ಸ್ಪರ್ಧೆ ಮತ್ತು ಲಘುಪ್ರಹಸನ ಸ್ಪರ್ಧೆಗಳು `ವಾಹ್ವ್’ ಎನ್ನುವಷ್ಟು ಚೇತೋಹಾರಿಯಾಗಿದ್ದವು.ಎಲ್ಲಕ್ಕಿಂತ ಮುಖ್ಯವಾಗಿ, ಅವರು ಆಯ್ದುಕೊಂಡ ವಸ್ತುವು ಅವರ ಚಿಂತನೆಯಲ್ಲಿನ ಪ್ರಬುದ್ಧತೆಯನ್ನೇ ಸೂಚಿಸುತ್ತಿದ್ದವು. ಇಂತಹ ಲಘುಪ್ರಹಸನಗಳನ್ನು ಅವರು ಯೂ ಟ್ಯೂಬ್ ವಿಡಿಯೋಗಳಿಂದ ಪ್ರಭಾವಿತರಾಗಿ ಹೆಣೆದಿರಬಹುದೆಂದು ಭಾವಿಸಿದರೂ ಅವರ ಆಯ್ಕೆಗಾಗಿ ಮೆಚ್ಚುಗೆ ಸೂಚಿಸಲೇಬೇಕು! ಇನ್ನೂ ಸೂಕ್ಷ್ಮವಾಗಿ ಗಮನಿಸುವುದಾದರೆ, ಪ್ರತಿ ಪ್ರದರ್ಶನದಲ್ಲೂ ಒಂದು ಬಗೆಯ ಸಾಂಸ್ಕೃತಿಕ ಪ್ರತಿರೋಧ ಢಾಳಾಗಿ ಕಾಣಿಸುತ್ತಿತ್ತು. ಒಂದು ಧರ್ಮದ  ಆಚರಣೆ ಮತ್ತು ಆರಾಧನಾ ಕ್ರಮಗಳನ್ನು ಇನ್ನೊಂದು ಧರ್ಮಕ್ಕೆ ಸೇರಿದ ಮಗು ರಂಗದ ಮೇಲೆ ತರುವಾಗ ಮಗುವಿನ ಮನೋಭಿತ್ತಿಯಲ್ಲಿ ಧರ್ಮದ ಗಡಿಗಳೆಲ್ಲ ಅಸ್ಪಷ್ಟಗೊಳ್ಳುತ್ತಾ ಹೋಗುತ್ತವೆ.  


ಸಾಂತಾಕ್ಲಾಸ್ ಆಗಿ ಮಕ್ಕಳಿಗೆ 
ಮಿಠಾಯಿ ಹಂಚಿದ ಹುಡುಗ ಸೌಹಾರ್ಧ ಮತ್ತು ಸಾಮರಸ್ಯದ ಕನಸುಗಳನ್ನೂ ಹಂಚುತ್ತಿರುವಂತೆ,  ಬುರ್ಕಾ ಧರಿಸಿಯೇ ಶಾಲೆಯವರೆಗೂ ಬಂದ ತನ್ನ ಅಮ್ಮನ ಸಹಾಯದಲ್ಲಿ ಮೈಗೆ ಮಣ್ಣು ಮೆತ್ತಿಕೊಂಡು ಬುದ್ಧನಾದ ಹುಡುಗಿ ಇದೇ ಮಣ್ಣಿನಿಂದಲೇ ಮತ್ತೆ ಮತ್ತೆ ಬುದ್ದನನ್ನು ಈ ನೆಲವು ಸೃಜಿಸಬೇಕು ಎಂದು ಸಾರುತ್ತಿರುವಂತೆಯೂ ತೋರಿತು.  ಗಂಡು-ಹೆಣ್ಣು ಎಂಬ ಜೈವಿಕ ವ್ಯತ್ಯಾಸವನ್ನು ಬಳಸಿಕೊಂಡು ಅಸಮಾನ ಸಾಮಾಜಿಕ ಮತ್ತು ಧಾರ್ಮಿಕ ಪರಿಸರವನ್ನು ರೂಪಿಸುವ ಎಲ್ಲ ಮನಸ್ಸುಗಳಿಗೂ ಉತ್ತರವೆಂಬಂತೆ ಹುಡುಗಿಯೊಬ್ಬಳು ತಾನೇ ಥರ್ಮೋಕೋಲ್ ಮತ್ತಿತರ ವಸ್ತುಗಳಿಂದ ರೂಪಿಸಿದ ಶಬರಿಗಿರಿಯ ಶೃಂಗದಲ್ಲಿ ಅಯ್ಯಪ್ಪನಾಗಿ ಸ್ತಬ್ಧಳಾದಳು.ಇದೇ ಅಲ್ಲವೇ  ಸಾಂಸ್ಕೃತಿಕ ಪ್ರತಿರೋಧ? 





ನಮ್ಮ ಇಷ್ಟ ಮತ್ತು ಆಧ್ಯತೆಗಳನ್ನು ಮಾರ್ಪಡಿಸುತ್ತಾ ಲೋಕದ ಜನರನ್ನೆಲ್ಲ ಕೊಳ್ಳುಬಾಕರನ್ನಾಗಿ ಮಾಡುವ ವ್ಯಾಪಾರಿ ಹುನ್ನಾರಗಳು ಜಾಹಿರಾತುಗಳ ರೂಪತಳೆದು ನಮ್ಮೆದುರು ಎಲ್ಲವನ್ನೂ ಒದಗಿಸುವ ಅಲ್ಲಾದೀನ್ ನ ಮಾಯದ ದೀಪದಂತೆ ಕಾಣುವುದು ಸುಳ್ಳಲ್ಲ. ಇಂತಹ ವ್ಯಾಪಾರಿ ಹುನ್ನಾರಗಳಿಗೆ ಇಂಬುಕೊಡುವ ಮಾಧ್ಯಮಗಳು ಕೂಡಾ ನಮ್ಮ ಮಕ್ಕಳ ಪ್ರಹಸನದಲ್ಲಿ ವ್ಯಂಗ್ಯದ ಮೊನೆಯಲ್ಲಿ ಚುಚ್ಚಿಸಿಕೊಂಡವು. ದುಡಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಸರಕಾರಿ ಪ್ರಯತ್ನಗಳು, ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ ಸೈನಿಕರು, ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ತಾಯಿಯ ತ್ಯಾಗ ಹೀಗೆ ಬೇರೆ ಬೇರೆ ವಿಷಯಗಳನ್ನು ರಂಗದ ಮೇಲೆ ಹಿಡಿದಿಟ್ಟ ಎಲ್ಲ ಮಕ್ಕಳೂ ಅಭಿನಂದನಾರ್ಹರು.




No comments:

Post a Comment